ನವದೆಹಲಿ: ಒಬಿಸಿಗೆ ಶೇಕಡ 50ರಷ್ಟು ಮೀಸಲಾತಿ ಕೋರಿದ್ದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ರಾಜ್ಯ ಸರ್ಕಾರದ ಆಡಳಿತದಲ್ಲಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅಖಿಲ ಭಾರತ ಕೋಟಾದ ಅಡಿಯಲ್ಲಿ ಒಬಿಸಿಗೆ ಶೇಕಡ 50 ರವರೆಗೆ ಮೀಸಲಾತಿ ವಿಸ್ತರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದು ಮಧ್ಯಂತರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ನಾಗೇಶ್ವರರಾವ್ ನೇತೃತ್ವದ ಪೀಠ ಅರ್ಜಿಯಲ್ಲಿನ ವಾದವನ್ನು ಒಪ್ಪದೇ ತಿರಸ್ಕರಿಸಿದೆ. ತಮಿಳುನಾಡಿನ ಆಡಳಿತರೂಢ ಪಕ್ಷ ಎಐಎಡಿಎಂಕೆ ಮತ್ತು ವಿರೋಧ ಪಕ್ಷ ಡಿಎಂಕೆ ಈ ಕುರಿತು ಅರ್ಜಿ ಸಲ್ಲಿಸಿದ್ದವು. ಮದ್ರಾಸ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುವ ಸಮತಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಮುಂದಿನ ಶೈಕ್ಷಣಿಕ ವರ್ಷದಿಂದ ಈ ಸಮಿತಿ ಕೈಗೊಳ್ಳುವ ನಿರ್ಧಾರ ಅನ್ವಯವಾಗುತ್ತವೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಈ ವಾದವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.