ಪ್ರತಿ ವರ್ಷ ಜನವರಿ 26 ರ ಗಣರಾಜ್ಯೋತ್ಸವದಂದು ವಿದೇಶಿ ಗಣ್ಯರನ್ನು ಆಹ್ವಾನಿಸಿ, ದಿಲ್ಲಿಯಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ಪರೇಡ್ ನಡೆಸುವ ಪರಿಪಾಠ ನಡೆಸಿಕೊಂಡು ಬರಲಾಗುತ್ತಿದೆ.
ಆದರೆ, ಈ ಬಾರಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಯಾವುದೇ ವಿದೇಶಿ ಗಣ್ಯರನ್ನು ಆಹ್ವಾನಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಈ ವಿಷಯ ತಿಳಿಸಿದ್ದು, ಜಾಗತಿಕ ಕೊರೋನಾ ಸಂದರ್ಭ ಇರುವ ಹಿನ್ನೆಲೆಯಲ್ಲಿ ನಮ್ಮ ಗಣರಾಜ್ಯೋತ್ಸವಕ್ಕೆ ಯಾವುದೇ ವಿದೇಶಿ ಗಣ್ಯರನ್ನು ಆಹ್ವಾನಿಸದಿರಲು ನಿರ್ಧರಿಸಲಾಗಿದೆ ಎಂದರು.
ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವ ಚಿಂತನೆಯಿತ್ತು. ಆದರೆ, ಯುಕೆಯಲ್ಲಿ ರೂಪಾಂತರಿ ಕೊರೋನಾ ಕಾಣಿಸಿಕೊಂಡಿದ್ದರಿಂದ ಲಾಕ್ ಡೌನ್ ಜಾರಿಯಾಗಿರುವುದರಿಂದ ಭಾರತಕ್ಕೆ ಬರಲಾಗುವುದಿಲ್ಲ ಎಂದು ಅವರೂ ತಿಳಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ 55 ವರ್ಷದ ನಂತರ ಇದೇ ಮೊದಲ ಬಾರಿಗೆ ವಿದೇಶ ಗಣ್ಯರಿಲ್ಲದೆ ಗಣರಾಜ್ಯೋತ್ಸವ ನಡೆಯಲಿದೆ. ಈ ಹಿಂದೆ 1966 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನದ ಹಿನ್ನೆಲೆಯಲ್ಲಿ ವಿದೇಶಿ ಗಣ್ಯರನ್ನು ಆಹ್ವಾನಿಸಿರಲಿಲ್ಲ.