ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಡವರು, ವಲಸಿಗರಿಗೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಲಾಗಿದೆ.
ನಗರದ ಬಡವರು ಮತ್ತು ವಲಸಿಗರಿಗೆ ಕೈಗೆಟುಕುವ ದರದಲ್ಲಿ ಬಾಡಿಗೆ ಗೃಹ ಸಮುಚ್ಚಯ(ಹೌಸಿಂಗ್ ಕಾಂಪ್ಲೆಕ್ಸ್) ನೀಡುವ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಈಗಾಗಲೇ ಇರುವ ಸರ್ಕಾರಿ ಅನುದಾನಿತ ಕಟ್ಟಡ ಸಮುಚ್ಚಯಗಳನ್ನು ಕೈಗೆಟುಕುವ ದರದಲ್ಲಿ ವಸತಿ ಸಮುಚ್ಚಯಗಳನ್ನಾಗಿ ಪರಿವರ್ತಿಸಲಾಗುವುದು.
ಗ್ರಾಮೀಣ ಪ್ರದೇಶ ಮತ್ತು ಸಣ್ಣ ನಗರಗಳಿಂದ ಉದ್ಯೋಗ ಅರಸಿ ನಗರಪ್ರದೇಶಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ವಸತಿ ಸಂಕೀರ್ಣಗಳು ಖಾಲಿ ಇದ್ದರೆ ಅವುಗಳನ್ನು ಬಳಸಿಕೊಂಡು ವಸತಿ ಸೌಲಭ್ಯ ಕಲ್ಪಿಸಲಾಗುವುದು. ನಗರ ಸ್ಥಳೀಯ ಆಡಳಿತ ಸಂಸ್ಥೆಗಳು ವಸತಿ ಸಂಕೀರ್ಣಕ್ಕೆ ಅಗತ್ಯವಾದ ಮಾರ್ಪಾಡು ಮಾಡಿ ನೀರು, ರಸ್ತೆ ಮೂಲ ಸೌಕರ್ಯ ಒದಗಿಸಬೇಕಿದೆ ಎಂದು ಹೇಳಲಾಗಿದೆ.