ಇಡೀ ದೇಶವೇ ದೀಪಾವಳಿಯ ಮೂಡ್‌ನಲ್ಲಿರುವಾಗ ತಂತಮ್ಮ ಪರಿವಾರಗಳನ್ನು ಬಿಟ್ಟು ಸಾವಿರಾರು ಕಿಮೀ ದೂರದಲ್ಲಿರುವ ಗಡಿಗಳಲ್ಲಿ ಕರ್ತವ್ಯದಲ್ಲಿರುವ ಯೋಧರಿಗಾಗಿ ದೇಶವಾಸಿಗಳು ತಂತಮ್ಮ ಮನೆಗಳಲ್ಲಿ ಒಂದೊಂದು ದೀಪ ಹಚ್ಚಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
“ನಾವು ಹಬ್ಬಗಳ ಸಂದರ್ಭದಲ್ಲಿ, ಗಡಿಗಳಲ್ಲಿ ಉತ್ಸವಗಳ ಸಮಯದಲ್ಲೂ ಸಹ ದೇಶ ಕಾಯುತ್ತಿರುವ ನಮ್ಮ ಯೋಧರನ್ನು ನೆನೆಯಬೇಕು. ಭಾರತಾಂಬೆಯ ಈ ಧೈರ್ಯಶಾಲಿ ಮಕ್ಕಳ ಧೈರ್ಯವನ್ನು ಸನ್ಮಾನಿಸಲು ನಮ್ಮ ನಮ್ಮ ಮನೆಗಳಲ್ಲಿ ಒಂದೊಂದು ದೀಪಗಳನ್ನು ಹಚ್ಚಬೇಕು” ಎಂದು ಪ್ರಧಾನಿ ತಿಳಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ’ಮನ್ ಕೀ ಬಾತ್’ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಎಲ್ಲರಿಗೂ ದಸರಾ ಶುಭಾಶಯಗಳನ್ನು ಕೋರಿದ್ದಾರೆ. ಇದೇ ವೇಳೆ, ಕೋವಿಡ್-19 ಸಾಂಕ್ರಮಿಕ ಹಿನ್ನೆಲೆಯಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕಾದ ಅಗತ್ಯದ ಮಹತ್ವ ತಿಳಿಸಿದ ಪ್ರಧಾನಿ, ಈ ಸಂದರ್ಭದಲ್ಲಿ ಸಂಯಮ ಕಾಯ್ದುಕೊಳ್ಳಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಖಾದಿ ಬಟ್ಟೆಗಳ ಜನಪ್ರಿಯತೆ ಏರುತ್ತಿರುವ ವಿಚಾರವನ್ನು ಉಲ್ಲೇಖ ಮಾಡಿದ ಪ್ರಧಾನಿ, ಹಬ್ಬದ ಶಾಪಿಂಗ್ ಮಾಡುವ ವೇಳೆ ಸಾಧ್ಯವಾದಷ್ಟು ದೇಶೀಯವಾಗಿ ಉತ್ಪಾದನೆಯಾದ ಉತ್ಪನ್ನಗಳ ಖರೀದಿ ಮಾಡಲು ಮನವಿ ಮಾಡಿಕೊಂಡಿದ್ದಾರೆ.