
ಕೈ ಮೀರುತ್ತಿರುವ ಕೊರೋನಾ ವೈರಸ್ ನಿಯಂತ್ರಿಸಲು ವಿವಿಧ ರಾಜ್ಯಗಳು ಪರದಾಡುತ್ತಿವೆ. ಹೊರರಾಜ್ಯದಿಂದ ಆಗಮಿಸುವವರ ಚಲನವಲನವನ್ನು ನಿಯಂತ್ರಿಸಲು ಹಲವು ನಿಯಮಗಳನ್ನು ಜಾರಿ ಮಾಡುತ್ತಿದೆ.
ಇದೀಗ ಹರಿಯಾಣ ಸರ್ಕಾರ ತನ್ನ ರಾಜ್ಯಕ್ಕೆ ಹೊರರಾಜ್ಯದಿಂದ ಬರುವವರ ಮೇಲೆ ಕಣ್ಗಾವಲು ಇಡಲು ನೋಂದಣಿ ಕಡ್ಡಾಯಗೊಳಿಸಿದೆ.
ಹರಿಯಾಣಕ್ಕೆ ಆಗಮಿಸುವವರು ಮೂರು ದಿನಕ್ಕಿಂತ ಹೆಚ್ಚಿಗೆ ದಿನ ಕಳೆಯುವವರಾದರೆ ಅಂತವರು ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಹಾಗೂ ಸರ್ಕಾರದ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಪ್ರಯಾಣಿಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಹೋಟೆಲ್, ಅತಿಥಿಗೃಹ ಅಥವಾ ಸರಕಾರಿ ವಿಶ್ರಾಂತಿ ಗೃಹಗಳ ಚೆಕ್ ಇನ್ ಆದ ಕೂಡಲೇ ವಿವರಗಳನ್ನು ದಾಖಲಿಸಬೇಕಾಗುತ್ತದೆ.
ಪ್ರಯಾಣಿಕರು ಹರಿಯಾಣ ಪ್ರವೇಶದ ಚೆಕ್ ಪೋಸ್ಟ್ ನಲ್ಲೇ ವಿಳಾಸದ ವಿವರ ಒದಗಿಸಬೇಕಾಗುತ್ತದೆ. ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈ ವೇಳೆ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ 7ದಿನ ಸ್ವಯಂ ಪರಿವೀಕ್ಷಣೆಯಲ್ಲಿ ಇರಬೇಕಾಗುತ್ತದೆ ಎಂದು ಅಲ್ಲಿನ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.