ರಾಜಸ್ಥಾನ ಸರ್ಕಾರ 2021ರ ಫೆಬ್ರವರಿ 28ರವರೆಗೆ ರಾಜ್ಯದ ಎಲ್ಲಾ ವನ್ಯಜೀವಿ ಮೀಸಲು ಅಭಯಾರಣ್ಯ ಹಾಗೂ ಉದ್ಯಾನವನಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರೆಡ್ ಅಲರ್ಟ್ನಡಿಯಲ್ಲಿ ಎಲ್ಲಾ ಅರಣ್ಯ ಅಧಿಕಾರಿಗಳಿಗೆ ಬೇಟೆಗಾರರ ಶೋಧ ಕಾರ್ಯ ನಡೆಸುವಂತೆ ಸೂಚನೆ ನೀಡಲಾಗಿದೆ. ಹಾಗೂ ಈ ಕಾರ್ಯಾಚರಣೆಗಾಗಿ ಸ್ಥಳೀಯ ಪೊಲೀಸರ ನೆರವು ಪಡೆಯುವಂತೆ ನಿರ್ದೇಶಿಸಲಾಗಿದೆ.
ಶನಿವಾರ ಹೊರಡಿಸಲಾದ ಆದೇಶದಲ್ಲಿ ರೆಡ್ ಅಲರ್ಟ್ ಅಡಿಯಲ್ಲಿರುವ ಎಲ್ಲ ಅರಣ್ಯ ಅಧಿಕಾರಿಗಳಿಗೆ ಶೋಧ ಕಾರ್ಯಾಚರಣೆಯನ್ನ ತೀವ್ರಗೊಳಿಸಲು ಹಾಗೂ ಸ್ಥಳೀಯ ಪೊಲೀಸರ ಸಹಾಯ ಪಡೆದು ಬೇಟೆಗಾರರನ್ನ ಬಂಧಿಸುವಂತೆ ಹೇಳಿದೆ.
ಬೇಟೆಗಾರರು ಹಾಕಿದ ತಂತಿ ರಣಥಂಬೋರ್ ಹುಲಿಯ ಕುತ್ತಿಗೆಯಲ್ಲಿ ಪತ್ತೆಯಾದ ಹಿನ್ನೆಲೆ ರಾಜಸ್ಥಾನ ಸರ್ಕಾರ ಈ ಸೂಚನೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಸಾಂಬಾರ್ ಜಿಂಕೆಗಳನ್ನ ಬೇಟೆಯಾಡಿದ ಐದು ಮಂದಿ ಬೇಟೆಗಾರರನ್ನ ಮೌಂಟ್ ಅಬುವಿನಲ್ಲಿ ಬಂಧಿಸಲಾಗಿತ್ತು. ಇದೀಗ ರಣಥಂಬೋರ್ ಹುಲಿಗೂ ಸಂಚಕಾರ ಎದುರಾಗಿದೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆ 2021ರ ಫೆಬ್ರವರಿವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಶ್ರುತಿ ಶರ್ಮಾ ಹೇಳಿದ್ದಾರೆ.