ಮುಂಬೈ: ಸ್ಥಳೀಯ ರೈಲು ಹತ್ತುವಾಗ ಅಪಾಯಕ್ಕೆ ಸಿಲುಕಿದ್ದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸ್ ಹಾಗೂ ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯನ್ನು ಸಿ ಸಿ ಕ್ಯಾಮರಾ ವಿಡಿಯೋವನ್ನು ಆಧರಿಸಿ ಮುಂಬೈ ಮಿರರ್ ವರದಿ ಮಾಡಿದೆ.
ಡಿ.14 ರಂದು ಮಧ್ಯಾಹ್ನ 1.56 ರ ಹೊತ್ತಿಗೆ ಕರಿ ರೋಡ್ ಟರ್ಮಿನಲ್ಸ್ ನಲ್ಲಿ ಘಟನೆ ನಡೆದಿದೆ. ಸುಜಾತಾ ಚವಾಣ್ ಎಂಬ 65 ವರ್ಷದ ವೃದ್ಧೆ ತನ್ನ ಮೊಮ್ಮಗನೊಂದಿಗೆ ಛತ್ರಪತಿ ಶಿವಾಜಿ ಟರ್ಮಿನಲ್ಸ್ ಲೋಕಲ್ ಟ್ರೇನ್ ಹತ್ತುವ ಯತ್ನದಲ್ಲಿದ್ದಾಗ ಜಾರಿ ಬಿದ್ದು, ತೊಂದರೆಗೆ ಸಿಲುಕಿದ್ದರು.
ಪ್ಲಾಟ್ ಫಾರ್ಮ್ ಹಾಗೂ ರೈಲಿನ ರ್ಯಾಕ್ ನಡುವೆ ಇರುವ ಸಣ್ಣ ಜಾಗದಲ್ಲಿ ಅಜ್ಜಿ, ಮೊಮ್ಮಗ ಬಿದ್ದು ಸಿಕ್ಕಿಕೊಂಡಿದ್ದರು.
ಉಮಾನಾಥ ಮಿಶ್ರಾ ಎಂಬ ರೈಲ್ವೆ ಸಿಬ್ಬಂದಿ ಹಾಗೂ ಕೈಲಾಸ ಪಾಂಡುರಂಗ ಪಾಥಡೆ ಎಂಬ ಪೊಲೀಸ್ ಕಾನ್ಸ್ ಟೇಬಲ್ ಇಬ್ಬರೂ ಸೇರಿ ಅಜ್ಜಿ ಮೊಮ್ಮಗನನ್ನು ರಕ್ಷಿಸಿದ್ದಾರೆ. ಈ ಮೂಲಕ ನಿಜವಾದ ಹೀರೊಗಳು ಎನ್ನಿಸಿಕೊಂಡಿದ್ದಾರೆ. ಅದೇ ದಿನ ಮುಂಬೈನಲ್ಲಿ ಇನ್ನೊಂದು ಘಟನೆ ನಡೆದಿದ್ದು, ರಿಜ್ಬನ್ ಸಫಾದ್ ಖಾನ್ ಎಂಬ ಮಹಿಳೆ ಹಾಗೂ 6 ವರ್ಷದ ಬಾಲಕನ್ನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.