
ನವದೆಹಲಿ: ದೆಹಲಿಯಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಪಡಿತರ ಚೀಟಿದಾರರು ಇನ್ನು ಮುಂದೆ ಪಡಿತರವನ್ನು ಪಡೆದುಕೊಳ್ಳಲು ಪಡಿತರ ಅಂಗಡಿಗೆ ಬರಬೇಕಿಲ್ಲ. ಬಡ ಜನರ ಮನೆಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ಸುಮಾರು 72 ಲಕ್ಷ ಜನರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಮನೆ ಬಾಗಿಲಲ್ಲಿ ಪಡಿತರ ಪಡೆಯುವ ಇಲ್ಲವೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಆಯ್ಕೆಯನ್ನು ಪಡಿತರ ಚೀಟಿದಾರರಿಗೆ ಬಿಡಲಾಗುವುದು. ಇನ್ನು ಆರೇಳು ತಿಂಗಳಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ ಆರಂಭಿಸಲಿದ್ದು ಅದೇ ದಿನ ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಕೂಡ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.