ಪೊಂಗಲ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ತಮಿಳುನಾಡು ರಾಜ್ಯ ಸರ್ಕಾರ 2.6 ಕೋಟಿಗೂ ಅಧಿಕ ಪಡಿತರ ಚೀಟಿದಾರರಿಗೆ 2500 ರೂಪಾಯಿ ಹಣವನ್ನ ನೀಡಲು ನಿರ್ಧರಿಸಿದೆ. ಸುಗ್ಗಿ ಹಬ್ಬವನ್ನ ಎಲ್ಲರೂ ಸಂಭ್ರಮದಿಂದ ಆಚರಿಸಲಿ ಅಂತಾ ತಮಿಳುನಾಡು ಸರ್ಕಾರ ಜನವರಿ 4ರಿಂದ ಈ ಹಣವನ್ನ ವಿತರಿಸಲಿದೆ.
ಇನ್ನು ಈ ಹಣದ ಜೊತೆಯಲ್ಲಿ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿ, ಸಕ್ಕರೆ, ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಒಂದು ಬಟ್ಟೆ ಚೀಲ ಹಾಗೂ ಕಬ್ಬನ್ನ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ಸಿಗಲಿದೆ. ಕಳೆದ ವರ್ಷವೂ ತಮಿಳುನಾಡು ಸರ್ಕಾರ 1000 ರೂಪಾಯಿ ಹಣವನ್ನ ಹಬ್ಬದ ವಿಶೇಷವಾಗಿ ನೀಡಿತ್ತು.
ಆದರೆ ತಮಿಳುನಾಡು ಸಿಎಂ ಪಳನಿಸ್ವಾಮಿ ನಿರ್ಧಾರವನ್ನ ಪ್ರತಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ. ಜನತೆ ಆರ್ಥಿಕ ಸಂಕಷ್ಟದಲ್ಲಿದ್ದಾಗ ಪಳನಿಸ್ವಾಮಿ ಆರ್ಥಿಕವಾಗಿ ಜನರಿಗೆ ಸಹಾಯ ನೀಡಲಿಲ್ಲ. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ 2500 ರೂಪಾಯಿ ನೀಡೋದಾಗಿ ಘೋಷಿಸಿದ್ದಾರೆ ಅಂತಾ ಕಿಡಿಕಾರಿದ್ರು.