ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ ಎಂಬಲ್ಲಿ ಪತ್ತೆಯಾಗಿದ್ದಾಗಿ ದಾಖಲೆಗಳಲ್ಲಿ ತಿಳಿದು ಬಂದಿದೆ. ಅಲ್ಲಿನ ದಾಖಲೆಯಲ್ಲಿ ಅದರ ಜೀವಶಾಸ್ರ್ರೀಯ ಹೆಸರಾದ ಒಲಿಗೊಂಡನ್ ಖೇರಿಯನ್ಸಿಸ್ ಎಂದು ದಾಖಲಾಗಿದೆ.
ಇದಾದ ಬಳಿಕ 2015 ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಪತ್ತೆಯಾಗಿತ್ತು. ತೀರಾ ಇತ್ತೀಚೆಗೆ ಉತ್ತರಪ್ರದೇಶದ ದಧುವಾ ರಾಷ್ಟ್ರೀಯ ಉದ್ಯಾನದಲ್ಲಿ ಸಿಕ್ಕಿತ್ತು. ಇದೀಗ ಉತ್ತರಾಖಂಡದ ನೈನಿತಾಲ್ ಜಿಲ್ಲೆ ಬಿಂದುಖಟ್ಟ ಬಳಿಯ ಮನೆಯೊಂದರಲ್ಲಿ ಕೆಂಪು ಹವಳದ ಕುಕ್ರಿ (ಗೂರ್ಖಗಳು ಬಳಸುವ ಆಯುಧದಂತಹ ಹಲ್ಲು) ಹಾವು ಪತ್ತೆಯಾಗಿದೆ.
ತೆರಾಯ್ ಈಸ್ಟ್ ನ ವಿಭಾಗೀಯ ಅರಣ್ಯಾಧಿಕಾರಿ ನಿತೀಶ್ ಮಣಿ ತ್ರಿಪಾಠಿ ಹೇಳುವ ಪ್ರಕಾರ, ಶುಕ್ರವಾರದಂದು ಕುರ್ರಿಯಖಟ್ಟ ಗ್ರಾಮದ ಕವೀಂದ್ರ ಕೊರಂಗ ಎಂಬುವರಿಂದ ಗೌಲ ಅರಣ್ಯ ವಲಯಕ್ಕೆ ದೂರವಾಣಿ ಕರೆ ಬಂದಿತ್ತು. ಮನೆಯೊಳಗೆ ಹಾವು ಬಂದಿದ್ದು, ರಕ್ಷಿಸುವಂತೆ ಮನವಿ ಮಾಡಿದ್ದರು. ಅರಣ್ಯ ಸಿಬ್ಬಂದಿ ಹೋಗುವ ವೇಳೆಗೆ ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು. ಅದನ್ನು ನೋಡಿದ ಮೇಲೆ ಅಚ್ಚರಿಯಾಯಿತು. ಅತ್ಯಪರೂಪದ ಕೆಂಪುಹವಳದ ಹಾವು ಎಂಬುದು ಗೊತ್ತಾಯಿತು. ಕಾಡಿಗೆ ತಂದು ಬಿಡಲಾಗಿದೆ ಎಂದರು. ಐಎಫ್ಎಸ್ ಅಧಿಕಾರಿ ಕುಂದನ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.