ದೇವಭೂಮಿ ಎಂದೇ ಕರೆಯಲಾಗುವ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಅರಳುವ ಬ್ರಹ್ಮಕಮಲ ಹೂವುಗಳು ಈ ಬಾರಿ ಅವಧಿಗೂ ಮುನ್ನವೇ ಅರಳಿವೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಈ ಪ್ರಸಂಗ ಘಟಿಸಿದ್ದು, ಹವಾಮಾನ ಬದಲಾವಣೆಯ ಪರಿಣಾಮ ಹೀಗೆ ಆಗಿದೆ ಎನ್ನಲಾಗಿದೆ. ಸಮುದ್ರ ಮಟ್ಟದಿಂದ 3500-3800 ಮೀಟರ್ ಎತ್ತರದ ಪ್ರದೇಶಗಳಲ್ಲಿ ಅರಳುವ ಈ ಹೂವುಗಳು ಈ ಬಾರಿ ಅವಧಿಗೂ ಮುನ್ನ ಅರಳಿವೆ.
ವರ್ಷದಲ್ಲಿ ಒಮ್ಮೆ ಮಾತ್ರವೇ, ಅದೂ ಸೂರ್ಯಾಸ್ತವಾದ ಬಳಿಕ ಅರಳುವ ಈ ಹೂವುಗಳು, ಉತ್ತರಾಖಂಡದ ಏರು ಪ್ರದೇಶವಾದ ರುದ್ರಪ್ರಯಾಗ ಜಿಲ್ಲೆಯ ನಂದಿಕುಂಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅರಳಿವೆ.
ಕೊರೋನಾ ವೈರಸ್ ಕಾಟದಿಂದ ಈ ಪ್ರದೇಶಗಳಲ್ಲಿ ಪ್ರವಾಸೀ ಚಟುವಟಿಕೆಗಳು ಕಡಿಮೆಯಾಗಿರುವ ಕಾರಣ ಮಾಲಿನ್ಯ ಮಟ್ಟದಲ್ಲಿ ಇಳಿಕೆಯಾಗಿದ್ದು, ಸ್ವಲ್ಪ ಕಡಿಮೆ ಎತ್ತರದ ಪ್ರದೇಶಗಳಲ್ಲೂ ಸಹ ಬ್ರಹ್ಮಕಮಲಗಳು ಹೀಗೆ ಅರಳಲು ಕಾರಣವಾಗಿರಬಹುದು ಎಂದು ತಜ್ಞರು ತಿಳಿಸುತ್ತಿದ್ದಾರೆ. ಬದ್ರಿನಾಥ, ತುಂಗಾನಾಥ ಹಾಗೂ ಕೇದಾರನಾಥದ ಪವಿತ್ರ ದೇಗುಲಗಳಲ್ಲಿ ಈ ಬ್ರಹ್ಮಕಮಲ ಹೂವುಗಳನ್ನು ಬಳಸಿ ಪೂಜೆ ಮಾಡಲಾಗುತ್ತದೆ.