ಲಖ್ನೋ: ಉತ್ತರಪ್ರದೇಶದ ಕಾಸ್ ಗಂಜ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ.
ಘಟನೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಘಟನೆಯನ್ನು ಖಂಡಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿ ಯಶ್ ವೀರ್ ರಜಪೂತ್ ಎಂಬಾತ ಈ ಕೃತ್ಯ ಎಸಗಿದ್ದು ಮಹಿಳೆಯರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಂತ್ರಸ್ತೆಯ ಕುಟುಂಬ ಮತ್ತು ಯಶ್ ವೀರ್ ಕುಟುಂಬದ ನಡುವೆ ಮೊದಲಿನಿಂದಲೂ ದ್ವೇಷವಿದೆ. ಸಂತ್ರಸ್ತೆ ಕುಟುಂಬದವರು 4 ವರ್ಷಗಳ ಹಿಂದೆ ಯಶ್ ವೀರ್ ತಂದೆಯನ್ನು ಹತ್ಯೆ ಮಾಡಿದ್ದು ಜೈಲಿನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಯಶ್ ವೀರ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಸಂತ್ರಸ್ತೆಯ ತಾಯಿ ಅಪಹರಣ, ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಿಸಿದ್ದರು.
ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಗೆ ಹೋಗಿ ಬರುತ್ತಿದ್ದ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.