ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಲಿದ್ದಾರೆ. ನರೇಂದ್ರ ಮೋದಿ ದೆಹಲಿಯಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಮೋದಿ ಸಾಂಪ್ರದಾಯಿಕ ಧೋತಿ ಹಾಗೂ ಕುರ್ತಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮೋದಿ ಹಳದಿ ಮಿಶ್ರಿತ ಬಂಗಾರ ಬಣ್ಣದ ಕುರ್ತಾ ಹಾಗೂ ಬಿಳಿ ಧೋತಿ ಧರಿಸಿದ್ದಾರೆ. ಹಳದಿ ಧಾರ್ಮಿಕ ಕಾರ್ಯಕ್ರಮಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಈಗಾಗಲೇ ದೇಶ ಮತ್ತು ವಿದೇಶಗಳ ಅನೇಕ ಧಾರ್ಮಿಕ ಸ್ಥಳಗಳಿಗೆ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ಸಾಂಪ್ರದಾಯಿಕ ಉಡುಗೆಗೆ ಆದ್ಯತೆ ನೀಡುತ್ತಾರೆ. ಸ್ಥಳೀಯ ಸಂಸ್ಕೃತಿಯ ಬಟ್ಟೆಯನ್ನು ಅವರು ಧರಿಸುತ್ತಾರೆ.
ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಮೋದಿ ಅಲ್ಲಿನ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. 2017 ರಲ್ಲಿ ಪಾಟ್ನಾ ಸಾಹಿಬ್ ಗೆ ತೆರಳಿದ್ದರು. ಈ ಸಮಯದಲ್ಲಿ ಕುರ್ತಾ ಪೈಜಾಮಾ ಜೊತೆ ತಲೆಯ ಮೇಲೆ ಕೇಸರಿ ಬಣ್ಣದ ಪೇಟವನ್ನು ಧರಿಸಿದ್ದರು.
2019 ರಲ್ಲಿ ಕುಂಭಮೇಳದ ಮುಕ್ತಾಯದ ವೇಳೆ ಪ್ರಧಾನಿ ಮೋದಿ ಅವರು ಕೇಸರಿ ಬಣ್ಣದ ಕುರ್ತಾ ಮತ್ತು ಚುರಿದಾರ್ ಪೈಜಾಮಾ ಧರಿಸಿದ್ದರು. ಈ ಸಮಯದಲ್ಲಿ ಪಿಎಂ ಕೂಡ ಗಂಗೆಯಲ್ಲಿ ಸ್ನಾನ ಮಾಡಿದ್ದರು. ಪ್ರಧಾನಿ ಮೋದಿ ಅವರು 2019 ರಲ್ಲಿ ಬಾಬಾ ಕೇದಾರನಾಥ ಧಾಮ್‌ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮೋದಿ ವಿಶೇಷ ಉಡುಗೆ ಜನರಲ್ಲಿ ಚರ್ಚೆಯ ವಿಷಯವಾಗಿತ್ತು. ಪಿಎಂ ಮೋದಿ ಸಾಂಪ್ರದಾಯಿಕ ಬೂದು ಬಣ್ಣದ ಜಾಬ್ಬರ್ ಧರಿಸಿದ್ದರು. ಸೊಂಟದ ಸುತ್ತಲೂ ಕೇಸರಿ ಬಣ್ಣದ ಪಟ್ಟಿಯನ್ನು ಕಟ್ಟಿದ್ದರು. ತಲೆಯ ಮೇಲೆ ಹಿಮಾಚಲಿ ಕ್ಯಾಪ್ ಧರಿಸಿದ್ದರು.