ಚೆನೈ: ರಾಜಕೀಯಕ್ಕೆ ಎಂಟ್ರಿ ಕೊಡುವ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ನಿರೀಕ್ಷೆ ಹುಟ್ಟಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ನಟ ರಜನಿಕಾಂತ್, ಅನಾರೋಗ್ಯದ ಕಾರಣದಿಂದಾಗಿ ತಾವು ರಾಜಕೀಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪೊಲಿಟಿಕಲ್ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಇತ್ತೀಚೆಗಷ್ಟೇ ರಜನಿಕಾಂತ್ ಡಿಸೆಂಬರ್ 31ರಂದು ಹೊಸ ಪಕ್ಷ ಘೋಷಿಸುವುದಾಗಿ ಹೇಳಿದ್ದರು. 2021ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಈ ಮೂಲಕ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪರ್ವ ಆರಂಭಿಸುವುದಾಗಿ ಹೇಳಿದ್ದರು. ಆದರೆ ಇದೀಗ ರಜನಿಕಾಂತ್ ಅನಾರೋಗ್ಯದಿಂದಾಗಿ ತಮ್ಮ ರಾಜಕೀಯ ಪ್ರವೇಶ ನಿರ್ಧಾರದಿಂದಲೇ ಹಿಂದೆ ಸರಿಯುತ್ತಿರುವುದಾಗಿ ಹೇಳುವ ಮೂಲಕ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆದಿದ್ದ ’ಅನ್ನಾತೆ’ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರಿಗೆ ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ರಜನಿಕಾಂತ್ ಇದೀಗ ಚೆನ್ನೈನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆಯೇ ತಾವು ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ.