ರಾಜಸ್ಥಾನದ ಹನುಮನ್ಗಢ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅತ್ಯಾಚಾರದ ಆರೋಪಿ, ಜೈಲಿನಿಂದ ಬಿಡುಗಡೆಯಾಗಿ ಬರ್ತಿದ್ದಂತೆ ಪೀಡಿತೆಯನ್ನು ಜೀವಂತ ಸುಡಲು ಯತ್ನಿಸಿದ್ದಾನೆ. ಪೀಡಿತೆಯ ದೇಹ ಶೇಕಡಾ 70 ರಷ್ಟು ಸುಟ್ಟಿದೆ.
ಪೀಡಿತೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾಳೆ. ಪತಿಯಿಂದ ಬೇರೆಯಾಗಿರುವ ಮಹಿಳೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಆರೋಪಿ ಪ್ರದೀಪ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಮಹಿಳೆ ಮನೆ ಮುಂದಿದ್ದ ಸಿಸಿ ಟಿವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಡಿತೆ ಮನೆಯಿಂದ ಹೊರಗೆ ವ್ಯಕ್ತಿಯೊಬ್ಬ ಓಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಮಹಿಳೆ, ಪ್ರದೀಪ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಳು. ಪ್ರದೀಪ್ ಗೆ ಜಾಮೀನು ಸಿಕ್ಕಿತ್ತು. ಮಹಿಳೆ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಪ್ರದೀಪ್ ಗೋಡೆ ಹಾರಿ ಒಳಗೆ ಬಂದಿದ್ದನಂತೆ. ನಂತ್ರ ಗೇಟ್ ಬಾಗಿಲು ತೆಗೆದು ಓಡಿ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದನಂತೆ. ಪೀಡಿತೆ ಸಹೋದರ ಮಲಗಿದ್ದ ಕೋಣೆ ಬಾಗಿಲು ಹಾಕಿದ್ದ ಪ್ರದೀಪ್, ಮಹಿಳೆ ಕೋಣೆ ಬಾಗಿಲು ತಟ್ಟಿದ್ದ. ಆಕೆ ಹೊರ ಬರ್ತಿದ್ದಂತೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಎಂದು ಪೀಡಿತೆ ಅಜ್ಜಿ ಹೇಳಿದ್ದಾಳೆ.