ಐಸಿಯುವಿನಲ್ಲಿ ಮಲಗಿದ್ದ ಮಹಿಳೆಯ ಮೇಲೆ ವಾರ್ಡ್ಬಾಯ್ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನ ರಾಜಧಾನಿಯಲ್ಲಿರುವ ಶಲ್ಬೈ ಎಂಬ ಆಸ್ಪತ್ರೆಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂತ್ರಸ್ತೆಯನ್ನ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುವಿನಲ್ಲಿ ವಾರ್ಡ್ ಬಾಯ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆ ಕೈಗಳನ್ನ ಕಟ್ಟಿ ಹಾಕಲಾಗಿತ್ತು. ರಾತ್ರಿ ಪೂರ್ತಿ ಮಹಿಳೆ ಅತ್ತಿದ್ದಾರೆ. ನರ್ಸ್ ಬಳಿ ಈ ಘಟನೆ ಬಗ್ಗೆ ಹೇಳಿಕೊಳ್ಳಲು ಸಂತ್ರಸ್ತೆ ಮುಂದಾದ ವೇಳೆ ಆಕೆ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಮುಂಜಾನೆ ವೇಳೆ ಸಂತ್ರಸ್ತೆ ತನ್ನ ಪತಿಯ ಬಳಿ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಮಹಿಳೆಗೆ ಅನಾರೋಗ್ಯ ಇದ್ದ ಹಿನ್ನೆಲೆ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸೂಚನೆಯಂತೆ ಆಪರೇಷನ್ ಕೂಡ ಮಾಡಲಾಗಿತ್ತು.
ಆದರೆ ಆಸ್ಪತ್ರೆ ಸಿಬ್ಬಂದಿ ಪತ್ನಿಯ ಜೊತೆ ಇರಲು ಪತಿಗೆ ಅವಕಾಶವನ್ನ ನೀಡಿಲ್ಲ. ಹೀಗಾಗಿ ಪತಿ ಮನೆಗೆ ವಾಪಸ್ಸಾಗಿದ್ದರು ಎನ್ನಲಾಗಿದೆ. ಬೆಳಗ್ಗೆ ವೇಳೆಗೆ ಆಸ್ಪತ್ರೆಗೆ ಪತಿ ಬರುತ್ತಿದ್ದಂತೆಯೇ ಸಂತ್ರಸ್ತೆ ಈ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಮಹಿಳೆಗೆ ಮಾತನಾಡಲು ಸಾಧ್ಯವಾಗದ ಕಾರಣ ಲಿಖಿತ ರೂಪದಲ್ಲಿ ಪತಿಗೆ ಮಾಹಿತಿ ನೀಡಿದ್ದಾಳೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸಿಸಿ ಟಿವಿ ಫೂಟೇಜ್ನ್ನು ಕಲೆ ಹಾಕಿದ್ದಾರೆ. ಈ ಘಟನೆ ತುಂಬಾನೇ ಗಂಭೀರವಾದ ವಿಚಾರ. ಸಂತ್ರಸ್ತೆಯ ಪತಿ ಚಿತ್ರಕೂಟ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಗ್ರಾ ರಸ್ತೆಯ ನಿವಾಸಿಯಾಗಿದ್ದಾನೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಪ್ರದೀಪ್ ಮೋಹನ್ ಶರ್ಮಾ ಹೇಳಿದ್ರು.