ಕೊರೋನಾ ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆನ್ಲೈನ್ ತರಗತಿಗೆ ಪ್ರಾತಿನಿಧ್ಯ ಸಿಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ರಾಜಸ್ಥಾನದಲ್ಲಿ ವಿದ್ಯಾರ್ಥಿಯೊಬ್ಬ ನಿತ್ಯ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ನೆಟ್ ವರ್ಕ್ ಹುಡುಕುತ್ತಾ ಪರ್ವತ ಏರುತ್ತಾನೆ.
ಬಾರ್ಮರ್ ಜಿಲ್ಲೆಯ ದಾರುರಾ ಎಂಬ ಸಣ್ಣ ಹಳ್ಳಿಯ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಯಾದ ಹರೀಶ್ ಎಂಬಾತ ಈ ಸಾಹಸ ಮಾಡುತ್ತಿದ್ದಾನೆ.
ಕಳೆದ ಒಂದೂವರೆ ತಿಂಗಳಿನಿಂದ ಹರೀಶ್ 8 ಗಂಟೆಗೆ ಪರ್ವತ ಏರುತ್ತಾನೆ ಮತ್ತು ತರಗತಿ ಮುಗಿಸಿ ಮಧ್ಯಾಹ್ನ ಎರಡು ಗಂಟೆಗೆ ಮನೆಗೆ ವಾಪಸಾಗುತ್ತಿದ್ದಾನೆ ಎಂದು ಆತನ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಂದು ವೇಳೆ ನಾನು ಇಂಟರ್ನೆಟ್ ಸಂಪರ್ಕ ಕೊರತೆ ಎಂದು ಮನೆಯಲ್ಲೇ ಉಳಿದರೆ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಹೀಗಾಗಿ ಪ್ರತಿ ದಿನ ಅನಿವಾರ್ಯವಾಗಿ ಪರ್ವತ ಏರಬೇಕಾಗಿದೆ ಎಂದು ಹರೀಶ್ ವಿವರಿಸಿದ್ದಾರೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಗ್ರಾಮೀಣ ಭಾರತದ ಕೇವಲ ಶೇಕಡ 15ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿದೆ.