ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಈಗ ಮತ್ತೆ ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ ಪ್ರಸ್ತುತ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ.
ದೇಶದಲ್ಲಿ ಲಾಕ್ಡೌನ್ ಹಂತಹಂತವಾಗಿ ಸಡಿಲಿಕೆಯಾಗುತ್ತಿರುವ ಕಾರಣ ರೈಲು ಸಂಚಾರ ಪುನರಾರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಅಲ್ಲದೇ ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದೆ ಎಂದು ಹೇಳಲಾಗಿತ್ತು.
ಆದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಮೆಟ್ರೋ ರೈಲು ಸಂಚಾರ ಸಹ ಸದ್ಯಕ್ಕೆ ಆರಂಭವಾಗುವುದಿಲ್ಲವೆನ್ನಲಾಗಿದ್ದು, 230 ವಿಶೇಷ ರೈಲುಗಳು ಸಂಚಾರ ಹಾಗೂ ಮುಂಬೈನಲ್ಲಿ ಅಗತ್ಯ ಸೇವೆಗಳಿಗಾಗಿ ಸಂಚರಿಸುತ್ತಿರುವ ಲೋಕಲ್ ಟ್ರೈನ್ ಎಂದಿನಂತೆ ಸೇವೆ ನೀಡಲಿವೆ. ಅಗತ್ಯವಿದ್ದರೆ ಮತ್ತಷ್ಟು ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.