ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆ ಮಾಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ.
ಚೀನಾ ವಸ್ತುಗಳನ್ನು ನಿಷೇಧಿಸಬೇಕೆಂದು ದೇಶವ್ಯಾಪಿ ಒತ್ತಡ ಹೆಚ್ಚಾಗಿದೆ. ಇದೇ ವೇಳೆ ರೈಲ್ವೆ ಇಲಾಖೆ ಚೀನಾ ದೇಶದೊಂದಿಗಿನ 470 ಕೋಟಿ ರೂಪಾಯಿ ಒಪ್ಪಂದವನ್ನು ರದ್ದು ಮಾಡಿದೆ.
ಟೆಲಿಕಾಂ ಸಚಿವಾಲಯದಿಂದ ಚೀನಾ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ. ಬಿಎಸ್ಎನ್ಎಲ್ 4ಜಿ ನೆಟ್ವರ್ಕ್ ನಿರ್ಮಾಣಕ್ಕಾಗಿ ಚೀನಾ ಉಪಕರಣ ಬಳಕೆ ಮಾಡದಿರಲು ತೀರ್ಮಾನಿಸಲಾಗಿದೆ. ಇದರ ನಡುವೆಯೇ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಒಪ್ಪಂದವನ್ನು ರದ್ದುಪಡಿಸಿದೆ.
ದೆಹಲಿ – ಮೀರತ್ ಸೆಮಿ ಸ್ಪೀಡ್ ರೈಲ್ವೇ ಕಾರಿಡಾರ್ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಇಲಾಖೆಯಿಂದ ಚೀನಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಳೆದ 4 ವರ್ಷದ ಅವಧಿಯಲ್ಲಿ ಶೇಕಡ 20 ರಷ್ಟು ಮಾತ್ರ ಕಾಮಗಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದ ಕೈಬಿಡಲು ರೈಲ್ವೆ ತೀರ್ಮಾನಿಸಿದೆ ಎನ್ನಲಾಗಿದೆ.