ಜಲಂಧರ್: ಕುಪುತ್ರೋ ಜಾಯೇತ್ ನ ಕ್ವಚಿತಪಿಕುಮಾತಾ ನಭವತಿ (ಕೆಟ್ಟ ಪುತ್ರರಿರಬಹುದು. ಆದರೆ, ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ) ಎಂದು ಸಂಸ್ಕೃತ ಸುಭಾಷಿತ ಹೇಳುತ್ತದೆ. ಆದರೆ, ಪಂಜಾಬ್ ನಲ್ಲಿ ನಡೆದ ಘಟನೆಯೊಂದು ಸುಭಾಷಿತವನ್ನು ಸುಳ್ಳಾಗಿಸಿದೆ.
ಅಜ್ಜಿಯನ್ನು ಇಷ್ಟಪಡುತ್ತಾನೆ, ಪ್ರೀತಿಸುತ್ತಾನೆ ಎಂಬ ಕಾರಣಕ್ಕೆ 6 ವರ್ಷದ ತನ್ನ ಮಗನನ್ನು ಆತನ ತಾಯಿಯೇ ಭೀಕರವಾಗಿ ಇರಿದು ಕೊಂದ ಹೃದಯ ವಿದ್ರಾವಕ ಘಟನೆ ಪಂಜಾಬ್ ಜಲಂಧರ್ ನ ಶಾಕೋಟ್ ನಗರದ ಶೋಹಲ್ ಜಾಗಿರ್ ಎಂಬಲ್ಲಿ ನಡೆದಿದೆ.
ಕುಲವೀಂದರ್ ಕೌರ್ ತನ್ನ ಮಗುವನ್ನು ಕೊಂದ ಮಹಿಳೆಯಾಗಿದ್ದು, ನಂತರ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸಣ್ಣಪುಟ್ಟ ಗಾಯಗಳೊಂದಿಗೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕುಲವೀಂದರ್ ಕೌರ್ ಪತಿ ಇಟಲಿಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಪುತ್ರ ಅರ್ಷಪ್ರೀತ್ ಹಾಗೂ ಅತ್ತೆ (ಗಂಡನ ತಾಯಿ) ಚರಣಜಿತ್ ಕೌರ್ ಅವರೊಂದಿಗೆ ಶಾಕೋಟ್ ನಲ್ಲಿ ವಾಸಿಸುತ್ತಿದ್ದರು.
ಅತ್ತೆ – ಸೊಸೆಯ ನಡುವೆ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ ನಡೆಯುತ್ತಿತ್ತು. ರಾತ್ರಿ ಅತ್ತೆ, ಮೊಮ್ಮಗ ಅರ್ಷಪ್ರೀತ್ ಕೂಗುವುದನ್ನು ಕೇಳಿದ್ದಳು. ಓಡಿ ಹೋಗಿ ನೋಡಿದಾಗ ಬಾಲಕ ಗಾಯಗೊಂಡು ಬಿದ್ದಿದ್ದ. ಶಾಕೋಟ್ ಠಾಣೆಯಲ್ಲಿ ಕುಲವೀಂದರ್ ಕೌರ್ ವಿರುದ್ಧ ಪ್ರಕರಣ ದಾಖಲಾಗಿದೆ.