ಇಬ್ಬರು ದರೋಡೆಕೋರರು ಕಾರು ಮಾಲೀಕನ ಪತ್ನಿಯ ಸಮೇತ ಕಾರನ್ನ ಕದ್ದೊಯ್ದ ಘಟನೆ ಪಂಜಾಬ್ನ ದೇರಾ ಬಸಿಯಲ್ಲಿ ನಡೆದಿದೆ. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಬಂದಿದ್ದ ವೇಳೆ ಈ ಆಘಾತಕಾರಿ ಘಟನೆ ಸಂಭವಿಸಿದೆ.
ರಾಜೀವ್ ಚಂದ್ ಎಂಬವರು ತಮ್ಮ ಪತ್ನಿ ಜೊತೆ ಕಾರಿನಲ್ಲಿ ಸುಖ್ಮನಿ ಶಾಲೆಗೆ ಬಂದಿದ್ದರು. ಪತ್ನಿ ಕಾರಿನಲ್ಲೇ ಇದ್ದಿದ್ದರಿಂದ ರಾಜೀವ್ ಕೀಯನ್ನ ಕಾರಿನಲ್ಲೇ ಬಿಟ್ಟು ಶಾಲಾ ಕಟ್ಟಡದ ಒಳಗೆ ಹೋಗಿದ್ದಾರೆ. ರಾಜೀವ್ ಕಾರು ಬಿಟ್ಟು ಹೋದ ಕೆಲವೇ ಕ್ಷಣಗಳಲ್ಲಿ ಕಾರಿನ ಬಳಿ ಬಂದ ಇಬ್ಬರು ಕಳ್ಳರು ಕಾರನ್ನ ಎಗರಿಸಿದ್ದಾರೆ. ಇದರಲ್ಲಿ ಒಬ್ಬ ರಾಜೀವ್ ಪತ್ನಿಯ ಬಾಯಿಯನ್ನ ಬಿಗಿಯಾಗಿ ಹಿಡಿದುಕೊಂಡಿದ್ರೆ ಇನ್ನೊಬ್ಬ ಕಾರನ್ನ ಡ್ರೈವ್ ಮಾಡಿದ್ದಾನೆ.
ದರೋಡೆಕೋರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನ 5 ಕಿಲೋಮೀಟರ್ ದೂರದವರೆಗೆ ಕೊಂಡೊಯ್ದಿದ್ದಾರೆ. ಟೋಲ್ ಒಂದರ ಬಳಿಯಲ್ಲಿ ರಾಜೀವ್ ಪತ್ನಿ ರಿತು ಎಂಬಾಕೆಯನ್ನ ಕಾರಿನಿಂದ ಹೊರದಬ್ಬಿ ಕಾರು ಸಮೇತ ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಕಾರು ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.