ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ವಿಧೇಯಕ ವಿರೋಧಿಸಿ ಹೋರಾಟಕ್ಕಿಳಿದಿರುವ ರೈತರನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಉಗ್ರರಿಗೆ ಹೋಲಿಸಿದ್ದಾರೆ.
ಎಪಿಎಂಸಿ ತಿದ್ದುಪಡಿ ಮಸೂದೆ ವಿರೋಧಿಸಿ ಪಂಜಾಬ್ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಮಿತ್ರಕೂಟದಲ್ಲಿರುವ ಶಿರೋಮಣಿ ಅಕಾಲಿದಳದ ಸದಸ್ಯರು ಸಹ ಕಾಯ್ದೆ ವಿರೋಧಿಸಿ ಸಚಿವ ಸಂಪುಟ ಸಭೆಯಿಂದ ಹೊರನಡೆದಿದ್ದರು.
ಇದರ ಗಂಭೀರತೆ ಅರಿತ ಪ್ರಧಾನಿ ನರೇಂದ್ರ ಮೋದಿ, ಇಂಗ್ಲಿಷ್, ಹಿಂದಿಯಷ್ಟೇ ಅಲ್ಲದೆ ಪಂಜಾಬಿ ಭಾಷೆಯಲ್ಲೂ ಟ್ವೀಟ್ ಮಾಡುವ ಮೂಲಕ ರೈತರಿಗೆ ಕಾಯ್ದೆ ಬಗ್ಗೆ ವಿವರಿಸಿದ್ದಾರೆ. ಸರ್ಕಾರ ಅಥವಾ ಎಪಿಎಂಸಿ ಖರೀದಿ ಪ್ರಕ್ರಿಯೆ ನಿಲ್ಲಿಸುವುದಿಲ್ಲ. ಅದರ ಜೊತೆಗೆ ಖಾಸಗಿಯವರಿಗೂ ಮಾರಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ರೈತರಿಗೆ ಲಾಭ ಇದೆಯೇ ಹೊರತು ನಷ್ಟವಿಲ್ಲ ಎಂದಿದ್ದಾರೆ.
ಇದನ್ನು ರೀಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್, ಪ್ರಧಾನಮಂತ್ರಿ ಜೀ, ಯಾರಾದರೂ ನಿಜವಾಗಿ ಮಲಗಿದ್ದರೆ ಎಬ್ಬಿಸಬಹುದು, ಏಳುತ್ತಾರೆ ಕೂಡ. ಯಾರಾದರೂ ತಪ್ಪು ತಿಳಿದವರಿದ್ದರೆ ವಿವರಣೆ ನೀಡುವ ಮೂಲಕ ಅರ್ಥ ಮಾಡಿಸಬಹುದು. ಮಲಗಿದವರಂತೆ ನಟಿಸುವವರಿಗೆ ಹೇಗೆ ಹೇಳುವುದು ? ಸಿಎಎಯಿಂದ ದೇಶದ ಯಾರ ಪೌರತ್ವ ಹೋಗದಿದ್ದರೂ ರಕ್ತದ ಕೋಡಿ ಹರಿಸಿದ ಅದೇ ಉಗ್ರರು ಇವರು ಎನ್ನುವ ಮೂಲಕ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.