ಸಾಮಾನ್ಯವಾಗಿ ಏನಾದರೂ ಸಭೆ ಸಮಾರಂಭಗಳು ಇದ್ದರೆ ಸಿಹಿ ತಿಂಡಿಗಳನ್ನ ಹಂಚುವ ಮೂಲಕ ಸಂಭ್ರಮಿಸಲಾಗುತ್ತೆ.
ಆದರೆ ಸಿಂಗು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಸಿಹಿ ಹಂಚುವ ಮೂಲಕ ಕೇಂದ್ರ ಸರ್ಕಾರಕ್ಕೆ ರೈತರ ಕಷ್ಟವನ್ನ ಮನವರಿಕೆ ಮಾಡುವ ನವೀನ ಮಾರ್ಗಗಳನ್ನ ಬಳಸುತ್ತಿದ್ದಾರೆ.
ಪಂಜಾಬ್ನ ಮೊಹಾಲಿಯ ರೈತರ ಗುಂಪೊಂದು ವಿಶೇಷವಾದ ಹಸಿರು ಜಿಲೇಬಿಯನ್ನ ತಯಾರಿಸಿ ಅದನ್ನ ವಿತರಣೆ ಮಾಡುತ್ತಿದೆ. ಹಸಿರು, ಬೆಳೆಗಳ ಬಣ್ಣ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಹೀಗಾಗಿ ರೈತರು ಹಸಿರು ಬಣ್ಣದ ಜಿಲೇಬಿಯನ್ನ ತಯಾರಿಸಿದ್ದಾರೆ.
ನಾವು ಕಳೆದ ಕೆಲ ದಿನಗಳಿಂದ ಹಸಿರು ಜಿಲೇಬಿಯನ್ನ ವಿತರಿಸುತ್ತಿದ್ದೇವೆ. ಪ್ರತಿದಿನ ಸುಮಾರು 5 ಕ್ವಿಂಟಾಲ್ ಸಿಹಿಯನ್ನ ವಿತರಣೆ ಮಾಡಲಾಗ್ತಿದೆ ಎಂದು ಪ್ರತಿಭಟನಾ ನಿರತ ರೈತ ಜಸ್ವೀರ್ ಚಂದ್ ಹೇಳಿದ್ದಾರೆ.
ಹಸಿರು ಬಣ್ಣ ಹಸಿರು ಕ್ರಾಂತಿಯ ಜೊತೆಗೆ ಶಾಂತಿಯನ್ನೂ ಸಂಕೇತಿಸುತ್ತದೆ ಎಂದು ಚಾಂದ್ ಸಹಚರ ಬಾಲ್ದೇವ್ ಸಿಂಗ್ ಹೇಳಿದ್ರು.
ಇತ್ತ ಹರಿಯಾಣದ ಕರ್ನಲ್ನಲ್ಲಿ ಕೆಲ ಯುವಕರು ಪ್ರತಿಭಟನಾ ಸ್ಥಳದಲ್ಲಿ ವಿವಾಹ ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆದರು.