ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ.
ಪುಣೆಯ ರೇಖಾ ಸೆಲುಕರ್ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ ಇದ್ದ ವಸ್ತುಗಳನ್ನು ಹೊರಗೆ ಹಾಕಲು ಮುಂದಾದ ರೇಖಾ, ಇವುಗಳೊಂದಿಗೆ ಹಳೆಯ ಕೈಚೀಲವೊಂದನ್ನು ಸಹ ಆಚೆ ಎಸೆದುಬಿಟ್ಟಿದ್ದಾರೆ.
ತ್ಯಾಜ್ಯ ಸಂಗ್ರಹಣೆ ಮಾಡಲು ಮನೆಯ ಬಾಗಿಲಿಗೆ ಬಂದ ಪೌರ ಕಾರ್ಮಿಕರಿಗೆ ಇವನ್ನೆಲ್ಲಾ ಕೊಟ್ಟು ಕಳುಹಿಸಿದ್ದಾರೆ ರೇಖಾ. ಆದರೆ ಎರಡು ಗಂಟೆಗಳ ಬಳಿಕ ರೇಖಾಗೆ ತಾನು ಏನು ಮಾಡಿದ್ದೇನೆ ಎಂಬ ಅರಿವಾಗಿದೆ.
ಮಂಗಳಸೂತ್ರ, ಆಂಕ್ಲೆಟ್‌ಗಳು ಸೇರಿದಂತೆ ಮೂರು ಲಕ್ಷ ರೂ. ಬೆಲೆ ಬಾಳುವ ಇನ್ನಿತರ ಅಮೂಲ್ಯವಾದ ಆಭರಣಳು ಈ ಬ್ಯಾಗ್‌ನಲ್ಲಿ ಇದ್ದವು. ವರ್ಷಗಳ ಉಳಿತಾಯದಿಂದ ಈ ಆಭರಣಗಳನ್ನು ರೇಖಾ ಖರೀದಿಸಿದ್ದರು.
ಕೂಡಲೇ ಸಂಜಯ್ ಕುಟೆ ಹೆಸರಿನ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಸಂಪರ್ಕಿಸಿದ ರೇಖಾ, ಅಲ್ಲಿಂದ ಪುಣೆ ಮಹಾನಗರ ಪಾಲಿಕೆ ಪದಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಪಾಲಿಕೆಯ ಸ್ಯಾನಿಟರಿ ಇನ್ಸ್‌ಪೆಕ್ಟರ್ ಸುಶೀಲ್ ಮಲಾಯೆ ರೇಖಾರ ಪಾಡನ್ನು ನೋಡಿ, ಅವರ ಮನೆ ಇರುವ ಏರಿಯಾದ ಕಸ ಎಲ್ಲಿಗೆ ಹೋಗುತ್ತದೆ ಎಂಬ ದತ್ತಾಂಶ ತರಿಸಿಕೊಂಡು, ಆ ಪ್ರದೇಶದ ಕಾಂಪಾಕ್ಟರ್‌ರನ್ನು ಸಂಪರ್ಕಿಸಿದ್ದಾರೆ.
ದತ್ತಾಂಶ ತಜ್ಞ ಹೇಮಂತ್ ಲಖನ್ ತಮ್ಮ ಕರ್ತವ್ಯದ ಪರಿಧಿಯನ್ನೂ ಮೀರಿ 18 ಟನ್ ಕಸವನ್ನು ಹೆಕ್ಕಿ ಕೊನೆಗೂ ಆ ಬ್ಯಾಗನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ.