ಕೊರೊನಾ ಪ್ರಕರಣಗಳು ಮತ್ತೊಮ್ಮೆ ವೇಗಗತಿಯಲ್ಲಿ ಏರಿಕೆ ಕಾಣ್ತಿರೋ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪುಣೆಯಲ್ಲಿ ಹಲವು ಮುಖ್ಯ ನಿರ್ಬಂಧಗಳನ್ನ ಜಾರಿಗೆ ತರಲಾಗಿದೆ. ಪುಣೆಯಲ್ಲಿ ಈಗಾಗಲೇ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಶಾಲೆಗಳನ್ನ ಮಾರ್ಚ್ 21ರವರೆಗೆ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಪರಿಸ್ಥಿತಿಯನ್ನ ಅವಲೋಕಿಸಿ ಶಾಲೆಗಳನ್ನ ಪುನರಾಂಭಿಸಬೇಕೆ ಅಥವಾ ಬಂದ್ ಮಾಡಬೇಕೆ ಅನ್ನೋದನ್ನ ನಿರ್ಧರಿಸಲಾಗುತ್ತೆ.
ಪುಣೆ ನಗರದಲ್ಲಿ ಸಂಪೂರ್ಣ ಲಾಕ್ಡೌನ್ ಇರೋದಿಲ್ಲ, ಮಾಲ್ಗಳು, ಹೋಟೆಲ್ಗಳು ಹಾಗೂ ಸಿನಿಮಾ ಹಾಲ್ಗಳು ರಾತ್ರಿ 10ಗಂಟೆಯವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ರಾತ್ರಿ 11 ಗಂಟೆವರೆಗೆ ಹೋಂ ಡೆಲಿವರಿ ಸೌಲಭ್ಯ ನೀಡಬಹುದು. ಒಂದು ನಿರ್ದಿಷ್ಟ ಸಮಯದಲ್ಲಿ 5 ಮಂದಿ ಮಾತ್ರ ಅಂಗಡಿಗಳಲ್ಲಿ ಸೇರಬಹುದಾಗಿದೆ.
ಮದುವೆ ಸಮಾರಂಭಗಳಲ್ಲಿ 50 ಮಂದಿ ಸೇರಲು ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಇಂತಹ ಸಮಾರಂಭಗಳನ್ನ ಆಯೋಜಿಸಲು ಪೊಲೀಸರ ಅನುಮತಿ ಪಡೆಯೋದು ಅನಿವಾರ್ಯ.
ಪುಣೆಯಲ್ಲಿ ಗುರುವಾರ 2840 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,28,344ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 9,356ಕ್ಕೆ ತಲುಪಿದೆ.