ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ನಡುವೆಯೂ ಅನ್‌ಲಾಕ್ ಮಾಡಲಾಗಿದ್ದು, ಹೋದ ಕಡೆಯಲ್ಲ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಎನ್ನುವ ಹಲವು ಕಟ್ಟಲೆಗಳನ್ನು ಹಾಕಲಾಗಿದೆ. ಈ ಎಲ್ಲ ಮಾರ್ಗಸೂಚಿಯನ್ನು ನಿಭಾಯಿಸಲು ಪುಣೆ ರೈಲು ನಿಲ್ದಾಣ ತಂತ್ರಜ್ಞಾನದ ಮೊರೆ ಹೋಗಿದೆ.
ಹೌದು, ರೈಲು ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬರ ಥರ್ಮಲ್ ಚೆಕ್ ಮಾಡಲು, ನಿಲ್ದಾಣವನ್ನು ನಿಗದಿತ ಅವಧಿಯಲ್ಲಿ ಸ್ಯಾನಿಟೈಸ್ ಮಾಡಲು ಹಾಗೂ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಣ್ಣಿಡಲು ಈ ರೊಬೋಟ್ ಕ್ಯಾಪ್ಟನ್ ಅರ್ಜುನನನ್ನು ಇಡಲಾಗಿದೆ.
ಈ ರೊಬೋಟ್ ಪ್ರತಿಯೊಬ್ಬರ ಉಷ್ಣಾಂಶವನ್ನು ದಾಖಲಿಸಿಕೊಂಡು, ನಿಗದಿತ ಉಷ್ಣಾಂಶಕ್ಕಿಂತ ಹೆಚ್ಚಿದ್ದರೆ, ಕೂಡಲೇ ಮಾಹಿತಿ ರವಾನಿಸಲಿದೆ. ಇದರೊಂದಿಗೆ ನಿಲ್ದಾಣದಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದರೆ ಕೂಡಲೇ ಅದರ ಮಾಹಿತಿಯನ್ನು ರವಾನಿಸಲಿದೆ. ರೊಬೋಟ್ ವಿಡಿಯೊ ಮಾಡುವುದರ ಜೊತೆಗೆ ಮಾತನಾಡಲಿದ್ದು, ಸ್ಥಳೀಯ ಭಾಷೆಯಲ್ಲಿ ಜಾಗೃತಿ ಮೂಡಿಸುತ್ತದೆ. ರೈಲ್ವೇ ಪೊಲೀಸರು ಈ ರೊಬೋಟ್‌ನ್ನು ಉದ್ಘಾಟಿಸಿದ್ದು, ಅರ್ಜುನನ ಸಹಾಯದಿಂದ ಥರ್ಮಲ್ ಚೆಕ್ ಸುಲಭವಾಗಲಿದೆ. ಯಾರೊಂದಿಗೂ ನೇರ ಸಂಪರ್ಕವಿಲ್ಲದೇ ಸ್ಕ್ರೀನಿಂಗ್ ಮಾಡಬಹುದು ಎಂದಿದ್ದಾರೆ.