
ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.
ಪುಣೆ ನಗರದ ಕೇಶವ ನಗರದಲ್ಲಿ ವಿಟ್ಟಲ್ ಮಪಾರೆರ ಆಟೋರಿಕ್ಷಾ ಏರಿದ ದಂಪತಿಗಳು ಹದಪ್ಸರ ಬಸ್ ನಿಲ್ದಾಣದಲ್ಲಿ ಇಳಿದುಕೊಳ್ಳುವ ಸಂದರ್ಭದಲ್ಲಿ ತಮ್ಮೊಡನೆ ತಂದಿದ್ದ ಬ್ಯಾಗ್ ಅನ್ನು ಮರೆತುಬಿಟ್ಟಿದ್ದಾರೆ. ಇದಾದ ಮೇಲೆ ತಮ್ಮ ರಿಕ್ಷಾವನ್ನು ನಿಲ್ಲಿಸಿ ಚಹಾ ಕುಡಿಯಲೆಂದು ಇಳಿದ ವಿಟ್ಟಲ್ ಆ ಬ್ಯಾಗನ್ನು ಗಮನಿಸಿದ್ದಾರೆ. ಕೂಡಲೇ ಹತ್ತಿರದ ಘೋರ್ಪಡಿ ಚೌಕಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿಜಯ್ ಕದಮ್‌ಗೆ ಬ್ಯಾಗನ್ನು ಒಪ್ಪಿಸಿದ್ದಾರೆ ವಿಟ್ಟಲ್.
ಬಳಿಕ ಮಹಬೂಬ್ ಹಾಗೂ ಶಹನಾಜ್ ಶೇಖ್ ದಂಪತಿಗಳು ಪೊಲೀಸ್ ಠಾಣೆಗೆ ಅದಾಗಲೇ ಬಂದು ತಮ್ಮ ಕಳೆದುಹೋದ ಬ್ಯಾಗ್ ಕುರಿತಾಗಿ ದೂರು ದಾಖಲಿಸಿದ್ದನ್ನು ತಿಳಿದುಕೊಂಡ ಕದಮ್, ಹದಪ್ಸರ್ ಠಾಣೆಯನ್ನು ಸಂಪರ್ಕಿಸಿ, ದಂಪತಿಗೆ ಅವರ ಬ್ಯಾಗನ್ನು ಮರಳಿಸಿದ್ದಾರೆ.