ನಿಮಗೆ ರಾಯಲ್ ಎನ್ಫೀಲ್ಡ್ ಬೈಕ್ ಗೆಲ್ಲಬೇಕೆಂಬ ಆಸೆಯೇ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ನೀವು ಮಾಡಬೇಕಾಗಿದ್ದು ಇಷ್ಟೇ! ಬೃಹದಾಕಾರದ ಬುಲೆಟ್ ಥಾಲಿಯೊಂದನ್ನು ಒಂದೇ ಒಂದು ಗಂಟೆ ಒಳಗೆ ತಿಂದು ಮುಗಿಸಬೇಕು.
ಪುಣೆಯ ಶಿವರಾಜ್ ಹೊಟೇಲ್ ಈ ಸ್ಫರ್ಧೆಯನ್ನು ಆಯೋಜಿಸಿದೆ. ಈ ಹೊಟೇಲ್ನ ಮಾಂಸಾಹಾರಿ ಥಾಲಿಯನ್ನು 60 ನಿಮಿಷಗಳ ಒಳಗೆ ತಿಂದು ಮುಗಿಸಿದಲ್ಲಿ 1.65 ಲಕ್ಷ ರೂ.ಗಳ ರಾಯಲ್ ಎನ್ಫೀಲ್ಡ್ ಬೈಕ್ ನಿಮ್ಮದಾಗಲಿದೆ.
ತಮ್ಮ ಹೊಟೇಲ್ಗೆ ಗ್ರಾಹಕರನ್ನು ಆಹ್ವಾನಿಸುವ ಉದ್ದೇಶದಿಂದ ಈ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಮಾಲೀಕರಾದ ಅತುಲ್ ವಾಯ್ಕರ್ ತಿಳಿಸಿದ್ದಾರೆ.
ತಮ್ಮ ರೆಸ್ಟೋರೆಂಟ್ನ ವರಾಂಡಾದಲ್ಲಿ ಐದು ಹೊಸ ಎನ್ಫೀಲ್ಡ್ ಬೈಕ್ಗಳನ್ನು ನಿಲ್ಲಿಸಿರುವ ಅತುಲ್, ಮೆನು ಕಾರ್ಡ್ಗಳ ಮೇಲೂ ಸಹ ಈ ಬೈಕ್ ಗೆಲ್ಲುವ ಸ್ಫರ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ನಾಲ್ಕು ಕೆಜಿ ಮಟನ್ ಹಾಗೂ ಮೀನಿನ ಮಾಂಸದಿಂದ ಮಾಡಲ್ಪಟ್ಟ 12 ವಿವಿಧ ಭಕ್ಷ್ಯಗಳು ಈ ಥಾಲಿಯಲ್ಲಿ ಇವೆ. 55 ಮಂದಿ ಸೇರಿಕೊಂಡು ಈ ಎಲ್ಲಾ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ. ಸುರ್ಮಾಯ್, ಪಾಂಫ್ರೆಟ್ ಫ್ರೈಡ್ ಫಿಶ್, ಚಿಕನ್ ತಂದೂರಿ, ಡ್ರೈ ಮಟನ್, ಗ್ರೇ ಮಟನ್, ಚಿಕನ್ ಮಸಾಲಾ ಹಾಗೂ ಕೋಲುಂಬಿ ಬಿರಿಯಾನಿ ಈ ಥಾಲಿಯ ಪ್ರಮುಖ ಡಿಶ್ಗಳಾಗಿವೆ.
ಆರು ವಿವಿಧ ಬಗೆಯ ಥಾಲಿಗಳನ್ನು ಶಿವರಾಜ್ ಹೊಟೇಲ್ನಲ್ಲಿ ಸರ್ವ್ ಮಾಡಲಾಗುತ್ತಿದೆ. ಪ್ರತಿ ಥಾಲಿಯ ಬೆಲೆ 2500 ರೂ.ಗಳು.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸೋಮನಾಥ್ ಪವಾರ್ ಈ ಬುಲೆಟ್ ಥಾಲಿಯನ್ನು ಗಂಟೆಯೊಳಗೆ ತಿಂದು ಮುಗಿಸಿದ್ದು, ಅವರಿಗೆ ಬುಲೆಟ್ ಬೈಕನ್ನು ಹಸ್ತಾಂತರಿಸಲಾಗಿದೆ.