
ಮೇ 29ರಂದು ವಿಭೂತಿ ಶಂಕರ್ ಪತ್ನಿ ಸೇನಾ ಸಮವಸ್ತ್ರ ತೊಟ್ಟು ಲೆಫ್ಟಿನಂಟ್ ಹುದ್ದೆಯನ್ನ ಅಲಂಕರಿಸಲಿದ್ದಾರೆ. 2019ರ ಫೆಬ್ರವರಿ 8ರಂದು ಉಗ್ರರ ವಿರುದ್ಧ ಸೆಣಸಾಡುತ್ತಿದ್ದಾಗ ವಿಭೂತಿ ಶಂಕರ್ ಹುತಾತ್ಮರಾಗಿದ್ದರು.
ಈ ದುರ್ಘಟನೆ ನಡೆಯುವ ಕೇವಲ 9 ತಿಂಗಳ ಮುಂಚಿತವಾಗಿ ಮೇಜರ್ ವಿಭೂತಿ ಶಂಕರ್ 27 ವರ್ಷದ ನಿಖಿತಾ ಡೊಂಡಿಯಾಲರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ದೇಶಕ್ಕಾಗಿ ಪತಿ ವೀರ ಮರಣವನ್ನ ಅಪ್ಪಿದ ಬಳಿಕ ಸುಮ್ಮನೇ ಕೂರದ ನಿಖಿತಾ ಇದೀಗ ತಾವೂ ಭಾರತ ಮಾತೆಯ ಸೇವೆಗೆ ಸಜ್ಜಾಗಿ ನಿಂತಿದ್ದಾರೆ.
ಪತಿ ಹುತಾತ್ಮರಾಗಿ ಕೇವಲ ಆರೇ ತಿಂಗಳಲ್ಲಿ ನಿಖಿತಾ ಶಾರ್ಟ್ ಸರ್ವೀಸ್ ಕಮಿಷನ್ ಅರ್ಜಿಯನ್ನ ಸಲ್ಲಿಸಿದ್ದಾರೆ. ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಳಿಕ ಎಸ್ಎಸ್ಬಿ ಸಂದರ್ಶನದಲ್ಲೂ ಉತ್ತಮ ಪ್ರದರ್ಶನ ತೋರಿ ತೇರ್ಗಡೆ ಹೊಂದಿದ್ದರು.
ಇದಾದ ಬಳಿಕ ಚೆನ್ನೈನಲ್ಲಿ ತರಬೇತಿ ಪಡೆದಿರುವ ನಿಖಿತಾ ಇದೀಗ ಭಾರತೀಯ ಸೇನೆಗೆ ಸೇರ್ಪಡೆಯಾಗಲು ಸಂಪೂರ್ಣ ಸಜ್ಜಾಗಿದ್ದಾರೆ. ಇದೇ ತಿಂಗಳ 29ನೇ ತಾರೀಖಿನಂದು ನಿಖಿತಾ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಳ್ಳಲಿದ್ದಾರೆ.