ಪುದುಚೇರಿ: ಆಯುಷ್ಮಾನ್ ಭಾರತ್ ಯೋಜನೆಗೆ ಒಳಗೊಳ್ಳದ 2.17 ಲಕ್ಷ ಕುಟುಂಬಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ಪುದುಚೇರಿ ಆರೋಗ್ಯ ಇಲಾಖೆ ಆರಂಭಿಸಲಿದೆ.
ಡಿಸೆಂಬರ್ ವೇಳೆಗೆ ಯೋಜನೆಯನ್ನು ಆರಂಭಿಸಲಿದ್ದು ಕೇಂದ್ರಾಡಳಿತ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳೊಂದಿಗೆ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣರಾವ್ ಆರೋಗ್ಯ, ಕಾರ್ಯದರ್ಶಿ ಡಾ,ಟಿ. ಅರುಣ್ ಮತ್ತು ಇತರೆ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ವಿಮೆ ಕಂಪನಿ ಮೂಲಕ 2.17 ಲಕ್ಷ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರದ ಆಯುಷ್ಮಾನ್ ಭಾರತ ಯೋಜನೆಯಡಿ 1.3 ಲಕ್ಷ ಕುಟುಂಬಗಳನ್ನು ಆರೋಗ್ಯವಿಮೆ ಸೌಲಭ್ಯ ದೊರೆತಿದೆ. 24,900 ಪ್ರಮುಖ ಸರ್ಕಾರಿ ನೌಕರರನ್ನು ಹೊರತುಪಡಿಸಿ, 2.17 ಲಕ್ಷ ಕುಟುಂಬಗಳು ಯೋಜನೆಯಡಿ ಬರಲಿವೆ.
ಅರೆ ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಸೌಲಭ್ಯ ಸಿಗಲಿದೆ. 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸಿಗಲಿದೆ. ಆರೋಗ್ಯ ಇಲಾಖೆ ಹಣ ಮೀಸಲಿಟ್ಟಿದ್ದು ಖಾಸಗಿ ವೈದ್ಯಕೀಯ ಕಾಲೇಜುಗಳು, ವಿಮಾ ಕಂಪೆನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗುತ್ತದೆ.
ಆರೋಗ್ಯ ಇಲಾಖೆಯು ಪಕ್ಕದ ರಾಜ್ಯಗಳ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವ ಪಡೆಯಲಿದ್ದು ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪುದುಚೇರಿ ಸರ್ಕಾರದಿಂದ ಸಂಪೂರ್ಣ ಧನಸಹಾಯ ಪಡೆದಿರುವ ಯೋಜನೆಯ ಪ್ರಯೋಜನ ಪಡೆಯಲು ಪಡಿತರ ಚೀಟಿಗಳನ್ನು ಅರ್ಹತೆಯ ಆಧಾರವಾಗಿವೆ ಎಂದು ಸಚಿವರು ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.