
ಕೊರನಾ ಬಿಕ್ಕಟ್ಟಿನ ಮಧ್ಯೆ ಊರು ಬಿಟ್ಟಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸ ಹುಡುಕಿಕೊಂಡು ನಗರಗಳಿಗೆ ವಾಪಸ್ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ವಲಸೆ ಕಾರ್ಮಿಕರಿಗಾಗಿ 50,000 ಮನೆಗಳನ್ನು ನಿರ್ಮಿಸುವಂತೆ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಪೆಟ್ರೋಲಿಯಂ ಸಚಿವಾಲಯವು ಭಾರತೀಯ ತೈಲ ನಿಗಮ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್, ಗೇಲ್ ಇಂಡಿಯಾ ಲಿಮಿಟೆಡ್ ಮತ್ತು ಒಎನ್‌ಜಿಸಿಗಳಿಗೆ ತಮ್ಮ ಜಮೀನುಗಳಲ್ಲಿ ವಲಸೆ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲು ಸೂಚಿಸಿದೆ.
ಕೇಂದ್ರದ ಈ ಸೂಚನೆ ನಂತ್ರ ಪೆಟ್ರೋಲಿಯಂ ಕಂಪನಿಗಳು ಮನೆ ನಿರ್ಮಾಣಕ್ಕೆ ಜಮೀನು ಹುಡುಕಾಟ ಶುರು ಮಾಡಿವೆ. ವಲಸೆ ಕಾರ್ಮಿಕರಿಗೆ ಕಡಿಮೆ ಬಾಡಿಗೆಗೆ ಮನೆ ಸಿಗುವಂತೆ ವ್ಯವಸ್ಥೆ ಮಾಡುವುದು ಕಂಪನಿಗಳ ಉದ್ದೇಶವಾಗಿದೆ. ವಲಸೆ ಕಾರ್ಮಿಕರಿಗೆ ಅಗ್ಗದ ಬಾಡಿಗೆ ಮನೆಗಳನ್ನು ಮಾಡುವ ಯೋಜನೆಗೆ ಜುಲೈನಲ್ಲಿ ಸರ್ಕಾರ ಅನುಮೋದನೆ ನೀಡಿದೆ.