ಕೇರಳದಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ ಹಾರಾಡಿದ್ದನ್ನು ಖಂಡಿಸಿ ಡಿವೈಎಫ್ಐ, ಸಿಪಿಐಎಂ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇತ್ತೀಚೆಗಷ್ಟೇ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಂದಳಂ ಮತ್ತು ಪಾಲಕ್ಕಾಡ್ ನಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿತ್ತು. ಇದೀಗ ಪಾಲಕ್ಕಾಡ್ ಪಂಚಾಯತಿ ಕಚೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿರುವುದೂ ಅಲ್ಲದೆ, ಅಲ್ಲಲ್ಲಿ ಜೈ ಶ್ರೀ ರಾಮ್ ಎಂಬ ಬ್ಯಾನರ್ ಗಳೂ ಕಂಡುಬಂದಿವೆ.
ಪಂಚಾಯತಿ ಕಾರ್ಯದರ್ಶಿಯು ಪೊಲೀಸ್ ದೂರು ನೀಡಿದ್ದು, ಐಪಿಸಿ ಸೆಕ್ಷನ್ 153 ಅನ್ವಯ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಿಕ್ಕಿದ್ದು, ವ್ಯಕ್ತಿಯೊಬ್ಬ ರಾತ್ರಿ ವೇಳೆ ಗಾಂಧಿ ಪ್ರತಿಮೆ ಹತ್ತಿ ಪಕ್ಷದ ಬಾವುಟ ಹೊದಿಸಿ, ಕೆಳಗಿಳಿದು ನಡೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ಯಾರೆಂಬುದು ಸ್ಪಷ್ಟವಾಗಿಲ್ಲ. ಪಕ್ಷಕ್ಕೂ ಘಟನೆಗೂ ಸಂಬಂಧವಿಲ್ಲ ಎಂದು ಬಿಜೆಪಿ ತಳ್ಳಿ ಹಾಕಿದೆ.