ಪ್ರಿಯಾಂಕ ಗಾಂಧಿ ಟ್ವಿಟರ್ ಖಾತೆಗೂ ಬೀಳುತ್ತಾ ಬ್ರೇಕ್…? 12-02-2021 11:45AM IST / No Comments / Posted In: Latest News, India ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವವರ ವಿರುದ್ಧ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ರೈತ ಪ್ರತಿಭಟನೆ ವಿಚಾರದಲ್ಲಿ ವದಂತಿಗಳನ್ನ ಹಬ್ಬಿಸಿದ ಸಾಕಷ್ಟು ಟ್ವಿಟರ್ ಖಾತೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ ಟ್ವಿಟರ್ನಲ್ಲಿ ಸುಳ್ಳು ಸುದ್ದಿಯೊಂದನ್ನ ಪೋಸ್ಟ್ ಮಾಡಿದ್ದು ಇವರ ಖಾತೆ ವಿರುದ್ಧವೂ ಟ್ವಿಟರ್ ಇಂಡಿಯಾ ಕ್ರಮ ಕೈಗೊಳ್ಳುತ್ತಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ ಗಾಂಧಿ ವಾದ್ರಾ ಫೆಬ್ರವರಿ 7ನೇ ತಾರೀಖಿನಂದು ಬೆಳಗ್ಗೆ 9:08ರ ಸುಮಾರಿಗೆ ಒಂದು ಟ್ವೀಟ್ನ್ನು ಮಾಡಿದ್ದರು ಹಾಗೂ ಹತ್ತೇ ನಿಮಿಷದಲ್ಲಿ ಆ ಟ್ವೀಟ್ನ್ನು ಡಿಲೀಟ್ ಕೂಡ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಅವರು ಕೆಲ ಫೋಟೋಗಳನ್ನ ಶೇರ್ ಮಾಡಿದ್ದರು. ಅದರಲ್ಲಿ ಸ್ವಲ್ಪ ಮಂದಿ, ಭಾರತೀಯ ಯೋಧರ ಜೊತೆ ನಿಂತಿದ್ದರು. ಈ ಪೋಸ್ಟ್ನಲ್ಲಿ ಯೋಧನೊಬ್ಬ ತನಗೆ ರಜೆ ಸಿಗುತ್ತಿದ್ದಂತೆಯೇ ತನ್ನ ತಂದೆಯನ್ನ ಭೇಟಿಯಾಗಲು ಸೀದಾ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗಿತ್ತು. ಈ ವಿಚಾರ ಸುಳ್ಳು ಎಂದು ತಿಳಿಯುತ್ತಿದ್ದಂತೆಯೇ ಪ್ರಿಯಾಂಕ ತಮ್ಮ ಪೋಸ್ಟ್ನ್ನು ಡಿಲೀಟ್ ಮಾಡಿದ್ದಾರೆ. ಅಸಲಿಗೆ ಈ ಫೋಟೋ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಸ್ಥಳದಲ್ಲಿ ಕ್ಲಿಕ್ಕಿಸಿದ್ದಲ್ಲ. ಬದಲಾಗಿ ಪಂಜಾಬ್ನ ಲೂಧಿಯಾನದಲ್ಲಿ ತೆಗೆದ ಫೋಟೋವಾಗಿದೆ. ಇದೀಗ ಟ್ವಿಟರ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಿಯಾಂಕ ಗಾಂಧಿ ಟ್ವಿಟರ್ ಖಾತೆಗೂ ನಿರ್ಬಂಧದ ಶಿಕ್ಷೆ ಸಿಗುತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.