ಬಿಹಾರದ ಭಾಗಲ್ಪುರ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರಿಗೆ ಕ್ಯಾಂಪಸ್ನಲ್ಲಿ ಸಿಗರೇಟು ಸೇದಿದ್ದು ಮುಳುವಾಗಿದೆ. ಶಾಲೆಯಲ್ಲಿ ಸಿಗರೇಟು ಸೇದುತ್ತಿರುವಾಗ ವಿಡಿಯೋ ಮಾಡಿದವರು ಅದನ್ನು ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಬಿಹಾರದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ, ಮಕ್ಕಳು ಶಾಲೆಗೆ ಬರ್ತಿಲ್ಲ. ಆದ್ರೆ ಶಿಕ್ಷಕರು ಶಾಲೆಗೆ ಬಂದು ಕೆಲಸ ಮಾಡ್ತಿದ್ದಾರೆ. ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಅಕ್ಕಿ ನೀಡಲಾಗ್ತಿದೆ. ಮದರ್ಗಂಜ್ ಶಾಲೆಯ ಮುಖ್ಯ ಶಿಕ್ಷಕ ವಿನೋದ್ ಕುಮಾರ್ ಸಿಂಗ್ ಅವರು ಶಾಲೆಯ ಆವರಣದಲ್ಲಿ ಸಿಗರೇಟು ಸೇದುತ್ತಿದ್ದರು. ಯಾರೋ ಅವರ ವಿಡಿಯೋ ಮಾಡಿದ್ದಾರೆ.
ಈ ವೀಡಿಯೊ ಇಡೀ ಪ್ರದೇಶದಲ್ಲಿ ವೈರಲ್ ಆಗಿದೆ. ಗ್ರಾಮಸ್ಥರೊಬ್ಬರು ಈ ವಿಡಿಯೋವನ್ನು ಜಿಲ್ಲೆಯ ಶಿಕ್ಷಣಾಧಿಕಾರಿ ಸಂಜಯ್ ಕುಮಾರ್ ಅವರಿಗೆ ಕಳುಹಿಸಿದ್ದು, ನಂತರ ಶಿಕ್ಷಣ ಇಲಾಖೆ, ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಿದೆ. ತಂಬಾಕು ನಿಯಂತ್ರಣ ಕಾಯ್ದೆ 2003 ರಂತೆ ಕ್ರಮ ಕೈಗೊಂಡಿರುವುದಾಗಿ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದ ಆರೋಪದ ಮೇಲೆ ಜಿಲ್ಲಾ ಶಿಕ್ಷಣ ಕಚೇರಿಯ ಗುಮಾಸ್ತರನ್ನು ಅಮಾನತುಗೊಳಿಸಲಾಗಿದೆ.