
ಅರಣ್ಯದಲ್ಲಿ ವನ್ಯಜೀವಿಗಳ ನಡುವೆ ನಡೆಯುವ ಸಂಘರ್ಷ ಕೆಲವೊಮ್ಮೆ ನಗು ತರಿಸುವಂತಿರುತ್ತದೆ.
ಅಂತಹುದೇ ವಿಡಿಯೋವೊಂದನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಾಡುಪ್ರಾಣಿಗಳ ಈ ಕಾಳಗ ನಗೆ ತರಿಸುವಂತಿದೆ.
ಎರಡು ಬ್ಯಾಡ್ಜರ್ (ಕರಡಿ ರೀತಿಯ ಪ್ರಾಣಿ) ಗಳನ್ನು ಸುತ್ತುವರಿಯುವ ಸಿಂಹದ ಮರಿಗಳು, ಕಾಟ ಕೊಡಲು ಶುರು ಮಾಡುತ್ತವೆ.
ಅಷ್ಟೇ ಬೇಗ ತಿರುಗಿಬೀಳುವ ಬ್ಯಾಡ್ಜರ್ ಗಳು, ಸಿಂಹದ ಮರಿಗಳನ್ನೇ ಹಿಮ್ಮೆಟ್ಟಿಸುತ್ತವೆ. ಅಲ್ಲಿದ್ದ ನಾಲ್ಕೈದು ಸಿಂಹದ ಮರಿಗಳು, ಎರಡೇ ಬ್ಯಾಡ್ಜರ್ ಗಳ ಪರಾಕ್ರಮಕ್ಕೆ ತರಗೆಲೆಯಂತಾಗಿಬಿಡುತ್ತವೆ.
ಅಷ್ಟಕ್ಕೇ ಇವುಗಳ ಜಗಳ ನಿಲ್ಲುವುದಿಲ್ಲ. ದೊಡ್ಡ ಸಿಂಹಗಳೂ ಮರಿಸಿಂಹಗಳ ನೆರವಿಗೆ ಬರುತ್ತವೆ. ರೊಚ್ಚಿಗೆದ್ದ ಬ್ಯಾಡ್ಜರ್ ಗಳೆರಡು, ಎಲ್ಲವನ್ನೂ ಇಟ್ಟಾಡಿಸಿಬಿಡುತ್ತವೆ. ಬ್ಯಾಡ್ಜರ್ ದಾಳಿಗೆ ಪತರಗುಟ್ಟಿದ ಸಿಂಹಗಳನ್ನ ಕಂಡರೆ ನಗು ಬರದೆ ಇರಲಾರದು. 11 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದು, ಸಾವಿರಾರು ಜನರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ, 180 ಬಾರಿ ರಿಟ್ವೀಟ್ ಕೂಡ ಆಗಿದೆ.