ಪಣಜಿ: ಅಡುಗೆ ಮನೆಯ ಅಗತ್ಯ ತರಕಾರಿಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ.
ಇದೇ ಸಂದರ್ಭದಲ್ಲಿ ಗೋವಾ ಸರ್ಕಾರ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. 12 ಸಾವಿರ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ದಾರರು ಸೇರಿದಂತೆ ಗೋವಾ ರಾಜ್ಯದ ಸುಮಾರು 3.5 ಲಕ್ಷ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಿಸಲಾಗುತ್ತದೆ. ಇದಕ್ಕಾಗಿ ನಾಸಿಕ್ ನಿಂದ 1045 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ಗೋವಾ ಸರ್ಕಾರ ನಿರ್ಧರಿಸಿದೆ.
ಪ್ರತಿ ಕೆಜಿಗೆ 32 ರೂಪಾಯಿ ಸಬ್ಸಿಡಿ ದರದಲ್ಲಿ ಪಡಿತರ ಚೀಟಿದಾರರಿಗೆ ತಲಾ 3 ಕೆಜಿ ಈರುಳ್ಳಿ ಮಾರಾಟ ಮಾಡಲಾಗುತ್ತದೆ. ಗೋವಾ ಸರ್ಕಾರದ ವತಿಯಿಂದ ಈರುಳ್ಳಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದು ಪಡಿತರ ಚೀಟಿದಾರರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಸಿದ್ಧಿವಿನಾಯಕ ನಾಯಕ್ ಮಾಹಿತಿ ನೀಡಿದ್ದಾರೆ.
ಅತಿವೃಷ್ಟಿ ಮೊದಲಾದ ಕಾರಣದಿಂದ ಈರುಳ್ಳಿ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಬೇಡಿಕೆ ಹೆಚ್ಚಾಗಿರುವುದರಿಂದ ಈರುಳ್ಳಿ ಗಗನಕ್ಕೇರಿದೆ. ಹಲವೆಡೆ 100 ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಿಸಲು ಗೋವಾ ಸರ್ಕಾರ ಮುಂದಾಗಿದೆ.