ಜೈಪುರ್: ನಾದಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಭೈರಂಪುರ್ ಜಾಗೀರ್ ನ ಮಹಾವೀರ್ ಬಾಲೈ(30) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತನ 27 ವರ್ಷದ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಆಕೆಯ ಕಿರಿಯ ಸಹೋದರಿ ಮೇಲೆ ಮಹಾವೀರ್ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ.
ಗರ್ಭಿಣಿಯಾಗಿದ್ದ ಪತ್ನಿಯನ್ನು ನೋಡಿಕೊಳ್ಳಲು ಬಂದಿದ್ದ ನಾದಿನಿಯ ಮೇಲೆ ಅತ್ಯಾಚಾರಕ್ಕೆ ಮಹಾವೀರ್ ಯತ್ನಿಸಿದ್ದ ವೇಳೆ ತಂಗಿಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಪತ್ನಿ ಕೊಡಲಿಯಿಂದ ಥಳಿಸಿ ಪತಿಯನ್ನು ಕೊಲೆ ಮಾಡಿದ್ದು ಮೃತದೇಹವನ್ನು ಮನೆಯ ಹಿಂಭಾಗದಲ್ಲಿ ಹೂತಿದ್ದಾಳೆ.
ಮರುದಿನ ತಾನೇ ಪೊಲೀಸ್ ಠಾಣೆಗೆ ಹೋಗಿ ಕೊಲೆಯ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗರ್ಭಿಣಿಯಾಗಿದ್ದ ಪತ್ನಿ ಮನೆಗೆ ತಂಗಿಯನ್ನು ಕರೆಸಿಕೊಂಡಿದ್ದಳು. ಆದರೆ ನಾದಿನಿಯೊಂದಿಗೆ ಸಲುಗೆಯಿಂದ ಇದ್ದ ಪತಿ ಸಂಬಂಧ ಬೆಳೆಸಿದ್ದರಿಂದ ಆಕ್ರೋಶಗೊಂಡ ಪತ್ನಿಯೇ ಕೊಲೆ ಮಾಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗಗನ್ ದೀಪ್ ಸಿಂಗ್ ತಿಳಿಸಿದ್ದಾರೆ.