ದೇಶದಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಲ್ಲಿರುವ ರೂಪಾಂತರಿ ವೈರಸ್ನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಮಹಾರಾಷ್ಟ್ರದ ಒಂದು ಭಾಗದಲ್ಲಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ಪತ್ತೆ ಮಾಡಲಾಗಿತ್ತು ಎಂಬ ಆಘಾತಕಾರಿ ವಿಚಾರ ಹೊರ ಬಿದ್ದಿದೆ. ಆದರೆ ಇದೊಂದು ಇನ್ನೂ ಗುರುತು ಮಾಡದ ರೂಪಾಂತರಿ ವೈರಸ್ ಆಗಿರುವ ಕಾರಣ ಇನ್ನೂ ಇದಕ್ಕೆ ಮಹಾರಾಷ್ಟ್ರ ರೂಪಾಂತರಿ ಎಂದು ಹೆಸರಿಟ್ಟಿಲ್ಲ ಎಂದು ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನಿರ್ದೇಶಕ ಅನುರಾಗ್ ಅಗ್ರವಾಲ್ ಹೇಳಿದ್ದಾರೆ.
ಭಾರತೀಯ ರೂಪಾಂತರಿ ಎಂದು ಹೆಸರು ಪಡೆದಿರುವ B.1.617 ನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪತ್ತೆ ಮಾಡಲಾಗಿದೆ. ನಾವು ಪ್ರತಿ ಬಾರಿ ನೂರಾರು ರೂಪಾಂತರಿಗಳನ್ನ ನೋಡುತ್ತೇವೆ. ಆದರೆ ಏಕಾಏಕಿ ಅವುಗಳನ್ನ ಫ್ಲ್ಯಾಗ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ರು.
ಆದರೆ ಮಹಾರಾಷ್ಟ್ರದ ಒಂದು ಭಾಗದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್ಗಳು ಇದೇ ಲಕ್ಷಣಗಳನ್ನ ತೋರಿಸಿದೆ. ಜನವರಿ ತಿಂಗಳಲ್ಲಿ ಕೊರೊನಾ ಸೋಂಕು ಏಕಾ ಏಕಿ ಏರಿಕೆ ಕಾಣುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ಒಂದು ಭಾಗದಲ್ಲಿ ಮಾತ್ರ E484Q ಜೊತೆ L452R ಮ್ಯುಟೇಷನ್ ಕೂಡ ಕಾಣಿಸಿಕೊಂಡಿತ್ತು ಎಂದು ಡಾ. ಅಗರ್ವಾಲ್ ಹೇಳಿದ್ದಾರೆ.