ದೇಶಕ್ಕೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಯಾವುದೇ ಚಟುವಟಿಕೆಗಳು ನಡೆಯದೆ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದರೂ ಸಹ ಚಿತ್ರಮಂದಿರಗಳನ್ನು ಆರಂಭಿಸಲು ಅನುಮತಿ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಒಂದೊಮ್ಮೆ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ಸಿಕ್ಕರೂ ಸಹ ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ಚಿತ್ರರಂಗ ಈ ಹಿಂದಿನ ವೈಭವ ಪಡೆದುಕೊಳ್ಳುವುದು ಕಷ್ಟಕರ.
ಹೀಗಾಗಿಯೇ 41 ವರ್ಷಗಳ ಹಿಂದೆ ಆರಂಭವಾದ ತಮಿಳುನಾಡಿನ ಚೆನ್ನೈನಲ್ಲಿರುವ ‘ಎವಿಎಂ ರಾಜೇಶ್ವರಿ ಚಿತ್ರಮಂದಿರ’ ಶಾಶ್ವತವಾಗಿ ಮುಚ್ಚಿಹೋಗುತ್ತಿದೆ. ತಮಿಳಿನ ಖ್ಯಾತ ನಿರ್ಮಾಪಕ ಎ.ವಿ. ಮೇಯಪ್ಪ ಚೆಟ್ಟಿಯಾರ್ ತಮ್ಮ ಪತ್ನಿಯ ಹೆಸರಿನಲ್ಲಿ ಈ ಚಿತ್ರಮಂದಿರವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕರೂ ಸಹ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.