ಲಾಕ್ಡೌನ್ ಆದೇಶದ ಬಳಿಕವೂ ತರಕಾರಿ ಮಾರುಕಟ್ಟೆ ನಡೆಸುತ್ತಿದ್ದನ್ನ ವಿರೋಧಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಕೊರೊನಾ ಕರ್ಫ್ಯೂನಿಂದಾಗಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯನ್ನ ನಡೆಸಲು ಅವಕಾಶ ನೀಡಲಾಗಿತ್ತು. ಆದರೆ ಹಿರ್ವಾಹ್ದ ಸ್ಥಳೀಯ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನ ಕಾಪಾಡದೇ ತರಕಾರಿ – ಹಣ್ಣು ಮಾರಾಟ ಮಾಡಲಾಗುತ್ತಿತ್ತು.
ಈ ವೇಳೆ ಗಸ್ತು ತಿರುಗುತ್ತಿದ್ದ ವಾಹನದಲ್ಲಿ ಬಂದ ಪೊಲೀಸರು ಮಾರುಕಟ್ಟೆ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪೊಲೀಸರ ಮಾತನ್ನೇ ಕೇಳದ ಖರೀದಿದಾರರು ಹಾಗೂ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಪಾಡಲು ಹಿಂದೇಟು ಹಾಕಿದ್ದಾರೆ. ಕೂಡಲೇ ಅಧಿಕಾರಿಗಳ ಜೊತೆ ಪೊಲೀಸರು ಮಾರುಕಟ್ಟೆಯನ್ನ ಮುಚ್ಚಲು ಯತ್ನಿಸಿದ್ದಾರೆ. ಆದರೆ ಕೋಪಗೊಂಡ ಸ್ಥಳೀಯರು ಪೊಲೀಸರು ಹಾಗೂ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಪೊಲೀಸರಿಗೆ ಚಿಕ್ಕ ಪುಟ್ಟ ಗಾಯಗಳಾಗಿದೆ. ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳದಿಂದ ಕಾಲ್ಕೀಳುವ ಮೂಲಕ ಪಾರಾಗಿದ್ದಾರೆ.
ಮಧ್ಯ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಮೇ 17ರವರೆಗೆ ಕೊರೊನಾ ಕರ್ಫ್ಯೂ ವಿಧಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಧ್ಯ ಪ್ರದೇಶದಲ್ಲಿ 9715 ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ 1.1 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳಿವೆ.