ಅಹಮದಾಬಾದ್: ಪೋಕ್ಸೋ ಕಾಯಿದೆಯಡಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ 14 ವರ್ಷದ ಬಾಲಕಿಯ ಜೊತೆ ಪರಾರಿಯಾದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ಹೈಕೋರ್ಟ್ ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 24 ವರ್ಷದ ಅಪರಾಧಿ 14 ವರ್ಷದ ಬಾಲಕಿಯ ಜೊತೆ ಮತ್ತೆ ಓಡಿ ಹೋಗುವ ಮೂಲಕ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಭರೂಚ್ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಭರೂಚ್ ಜಿಲ್ಲೆಯ ಜಂಬೂಸರ್ ತಾಲೂಕಿನ ಉಚ್ಚಾದ್ ಗ್ರಾಮದ ನಿವಾಸಿ ದಿಲೀಪ್ ಪಾಡಿಯಾರ್ 2016 ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋಗಿದ್ದು ಆತನ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಪ್ರಕರಣ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾಗಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2018 ರ ಡಿಸೆಂಬರ್ ನಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಬಾಲಕಿ 16 ವರ್ಷ ಮೇಲ್ಪಟ್ಟವಳಾಗಿದ್ದರಿಂದ ಅತ್ಯಾಚಾರ ಆರೋಪ ಹೊರಿಸದ ಕಾರಣ 10 ವರ್ಷ ಜೈಲು ಶಿಕ್ಷೆ ಇಳಿಸಲಾಯಿತು. ಆದರೆ ಪೋಕ್ಸೋ ಕಾಯಿದೆಯಡಿ ತಪ್ಪಿತಸ್ಥ ಎಂಬುದು ಸಾಬೀತಾಗಿದ್ದರಿಂದ ಆತ ಶಿಕ್ಷೆಗೆ ಒಳಗಾಗಿದ್ದ. 2019ರ ಜನವರಿಯಲ್ಲಿ ಹೈಕೋರ್ಟ್ ನಲ್ಲಿ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಜಾಮೀನು ಪಡೆದುಕೊಂಡಿದ್ದ. ಜೈಲಿನಿಂದ ಹೊರಬಂದ ಆತ ಕಳೆದ ವರ್ಷ ನವೆಂಬರ್ ನಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಪರಾರಿಯಾಗಿದ್ದಾನೆ.
ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪೊಲೀಸರು ಮಗಳನ್ನು ಪತ್ತೆ ಹಚ್ಚಿರಲಿಲ್ಲ. ಇದರಿಂದಾಗಿ ಅವರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಸೋನಿಯಾ ಗೋಕಾನಿ ನೇತೃತ್ವದ ನ್ಯಾಯಪೀಠ ಅಪರಾಧಿಯ ಜಾಮೀನು ರದ್ದುಗೊಳಿಸುವ ಕುರಿತಾಗಿ ಅರ್ಜಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಜುಲೈ 20 ರೊಳಗೆ ಆರೋಪಿತ ವ್ಯಕ್ತಿ ಮತ್ತು ಆತನೊಂದಿಗೆ ಇರುವ ಬಾಲಕಿಯನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಎಸ್ಪಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ತುರ್ತು ವಿಷಯವೆಂದು ಪರಿಗಣಿಸಲು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.