ಹೊಸ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳನ್ನ ತರುತ್ತವೆ ಅನ್ನೋದನ್ನ ಮೊದಲು ನೋಡೋಣ. ಆ ಬಳಿಕ ಮಸೂದೆಯಲ್ಲಿ ಸಮಸ್ಯೆ ಕಂಡು ಬಂದರೆ ಅದನ್ನ ಸರಿ ಮಾಡೋಣ ಎಂದು ರಾಜ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೂತನ ಕೃಷಿ ಮಸೂದೆಯಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ವೃದ್ಧಿಯಾಗಲಿದೆ ಎಂಬ ನಂಬಿಕೆ ನನಗಿದೆ. ಎಂಎಸ್ಪಿ ಇದೆ, ಎಂಎಸ್ಪಿ ಇರಲಿದೆ, ಹಾಗೂ ಎಂಎಸ್ಪಿ ಮುಂದುವರಿಯಲಿದೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕೃಷಿಯಲ್ಲಿ ಯಾವ ಸುಧಾರಣೆ ಬೇಕು ಎಂದು ಪ್ರತಿಪಾದಿಸಿದ್ದರೋ ಅದೇ ಬದಲಾವಣೆಯನ್ನ ಈಗ ತರಲಾಗಿದೆ. ಪ್ರತಿ ಸರ್ಕಾರವೂ ಕೃಷಿ ಸುಧಾರಣೆಯನ್ನ ಈ ಹಿಂದೆ ಬೆಂಬಲಿಸಿದೆ. ಆದರೆ ಈಗ ವಿಪಕ್ಷಗಳು ಯೂ ಟರ್ನ್ ಹೊಡೆದಿವೆ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಛಾಟಿ ಬೀಸಿದ್ದಾರೆ.
ಸದನದಲ್ಲಿ ಪ್ರತಿಯೊಬ್ಬರು ರೈತರ ಆಂದೋಲನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಯಾವೊಬ್ಬ ವಿರೋಧ ಪಕ್ಷದ ನಾಯಕನೂ ಕೃಷಿ ಆಂದೋಲನ ಏಕೆ ನಡೀತಾ ಇದೆ ಅನ್ನೋದರ ಬಗ್ಗೆ ಮಾತೇ ಆಡಿಲ್ಲ. ಕೃಷಿ ಹೋರಾಟ ಆರಂಭವಾಗಿರೋದ್ರ ಮೂಲ ಉದ್ದೇಶ ಏನು ಅನ್ನೋದ್ರ ಬಗ್ಗೆ ಮೊದಲು ಚರ್ಚೆ ನಡೆಯಬೇಕು. ಈ ವಿಚಾರದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅತ್ಯಂತ ಶಕ್ತಿಶಾಲಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ರು.
BIG NEWS: ಅಪರಿಚಿತ ಶತ್ರು ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ – ಪ್ರಧಾನಿ ಮೋದಿ
ಶರದ್ ಪವಾರ್, ಕಾಂಗ್ರೆಸ್ ಈ ಹಿಂದೆ ಕೃಷಿ ಮಸೂದೆ ಪರ ಮಾತನಾಡಿದ್ದಾರೆ. ಆದರೆ ಈಗೇಕೆ ಯು ಟರ್ನ್ ಹೊಡೆದಿದ್ದಾರೆ ಅನ್ನೋದೇ ನನಗೆ ದೊಡ್ಡ ಆಶ್ಚರ್ಯಕರ ವಿಚಾರವಾಗಿದೆ. ನೀವು ಸರ್ಕಾರವನ್ನ ವಿರೋಧಿಸುವ ಬದಲು ರೈತರ ಬಳಿ ಹೋಗಿ ಕೃಷಿ ಕ್ಷೇತ್ರದಲ್ಲಿ ಈ ಬದಲಾವಣೆಯ ಅವಶ್ಯಕತೆ ಎಷ್ಟಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರೆ ದೇಶ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು.
ಮನಮೋಹನ್ ಸಿಂಗ್ ಈ ಹಿಂದೆ ಪ್ರಧಾನಿಯಾಗಿದ್ದ ವೇಳೆ ರೈತರಿಗೆ ಅವರ ಬೆಳೆಗಳನ್ನ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದ್ದರು. ಮನಮೋಹನ್ ಸಿಂಗ್ ಹೇಳಿದ್ದ ಮಾತನ್ನ ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ನೀವು ಹೆಮ್ಮೆ ಪಡಬೇಕಿತ್ತು. ಆದರೆ ಈ ರೀತಿ ಯೂಟರ್ನ್ ಹೊಡೆದಿದ್ದನ್ನ ಕಂಡು ನನಗೆ ಆಶ್ಚರ್ಯ ಉಂಟಾಯ್ತು ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.