ನವದೆಹಲಿ: ಆಸ್ತಿ ಕಾರ್ಡ್ ವಿತರಿಸುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 11 ರಂದು ಚಾಲನೆ ನೀಡಲಿದ್ದಾರೆ.
ಆಸ್ತಿ ಒಡೆತನಕ್ಕೆ ಸಂಬಂಧಿಸಿದ ಕಾರ್ಡ್ ಗಳನ್ನು ವಿತರಿಸುವ ಸ್ವಾಮಿತ್ವ ಯೋಜನೆ ಇದಾಗಿದ್ದು ಗ್ರಾಮೀಣ ಭಾರತ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯಾಗಿದೆ. ಡ್ರೋನ್ ಮೂಲಕ ಅಳೆದು ಸಿದ್ಧಪಡಿಸಲಾದ ಮನೆ ದಾಖಲೆಗಳನ್ನು ಗ್ರಾಮಸ್ಥರಿಗೆ ವಿತರಿಸಲಾಗುವುದು. ಮನೆ ಮತ್ತು ಸುತ್ತಲಿನ ಜಾಗಕ್ಕೆ ದಾಖಲೆ ಇಲ್ಲದ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ಲಕ್ಷಾಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದೆ. ತಮ್ಮ ಮನೆ, ಜಾಗವನ್ನು ಒತ್ತೆಯಿಟ್ಟು ಸಾಲ ಪಡೆಯಲು ಗ್ರಾಮೀಣ ಜನರಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಸ್ವಾಮಿತ್ವ ಯೋಜನೆ ಜಾರಿಗೊಳಿಸಲಾಗಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆಸ್ತಿ ಮಾಲೀಕರಿಗೆ ಯೋಜನೆಯಡಿ ಆಸ್ತಿ ದಾಖಲೆ ನೀಡಲಾಗುವುದು. ನಾಳೆ ಪ್ರಧಾನಿ ಮೋದಿ ಯೋಜನೆಗೆ ಚಾಲನೆ ನೀಡಲಿದ್ದು ಫಲಾನುಭವಿಗಳು ತಮ್ಮ ಮೊಬೈಲ್ ಗೆ ಬರುವ ಸಂದೇಶ ಲಿಂಕ್ ಮಾಡುವ ಮೂಲಕ ಆಸ್ತಿ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ರಾಜ್ಯ ಸರ್ಕಾರಗಳಿಂದ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ.