ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪಗಳು ಬಲವಾಗುತ್ತಿರುವ ನಡುವೆ, ಇದೇ ವಿಚಾರವಾಗಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯದಲ್ಲೂ ಸಹ ಪ್ರಾದೇಶಿಕ ಭಾಷೆಯಲ್ಲೇ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
’ಅಸ್ಸಾಂ ಮಾಲಾ’ ಅಭಿಯಾನದಡಿ ಹೆದ್ದಾರಿಗಳ ಮೇಲ್ದರ್ಜೆ ಹಾಗೂ ಎರಡು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಪ್ರತಿಯೊಂದು ರಾಜ್ಯವೂ ಸಹ ತನ್ನ ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಕಾರ್ಯಕ್ರಮಗಳನ್ನು ಕೊಡಮಾಡುವ ಕನಿಷ್ಠ ಒಂದು ಶೈಕ್ಷಣಿಕ ಸಂಸ್ಥೆ ಹೊಂದಿರಲಿ ಎಂಬ ಹೆಬ್ಬಯಕೆಯೊಂದು ನನಗೆ ಇದೆ” ಎಂದಿದ್ದಾರಲ್ಲದೇ, ಅಸ್ಸಾಂ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಂಥ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಇಂಥ ಕ್ರಮಗಳಿಂದ ದೂರದ ಪ್ರದೇಶಗಳಲ್ಲೂ ಸಹ ವೈದ್ಯಕೀಯ ಸೇವೆಗಳು ಜನರಿಗೆ ಲಭ್ಯವಾಗಲಿದ್ದು, ಜನರಿಗೆ ಅವರದ್ದೇ ಭಾಷೆಯಲ್ಲಿ ಸಂವಹನ ನಡೆಸುತ್ತಾ ಅವರ ಸಮಸ್ಯೆಗಳನ್ನು ಆಲಿಸುವ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿದ್ದಾರೆ ಎಂದಿದ್ದಾರೆ.