ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಡುವ ಮೂಲಕ ಭೂಮಿಪೂಜೆ ನೆರವೇರಿಸಲಿದ್ದಾರೆ.
12 ಗಂಟೆ 44 ನಿಮಿಷದ ಶುಭ ಗಳಿಗೆಯಲ್ಲಿ ಐದು ಶತಮಾನಗಳ ರಾಮಮಂದಿರ ಕನಸು ಸಾಕಾರಕ್ಕೆ ಸಮಯ ಕೂಡಿ ಬಂದಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ರಾಮಮಂದಿರ ನಿರ್ಮಾಣ ವಾಗ್ದಾನ ಈಡೇರಿಸಲು ಮುಹೂರ್ತ ನಿಗದಿಯಾಗಿದೆ.
ಬೆಳಿಗ್ಗೆ 11.30 ಕ್ಕೆ ಅಯೋಧ್ಯೆ ಸಾಕೇತ್ ಕಾಲೋನಿಯ ಹೆಲಿಪ್ಯಾಡ್ ಗೆ ಆಗಮಿಸಲಿರುವ ಮೋದಿ ಹನುಮಾನ್ ಗಡಿ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಮಮಂದಿರ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ ರಾಮಜನ್ಮಭೂಮಿ ಸದಸ್ಯರ ಭೇಟಿ ಮಾಡಲಿದ್ದಾರೆ.
ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಶ್ರೀ ರಾಮ್ ಮಂದಿರ್ ಟ್ರಸ್ಟ್ ಅಧ್ಯಕ್ಷ ನಿತ್ಯ ಗೋಪಾಲದಾಸ್, ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಭಾರಿ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ಇಡೀ ನಗರವನ್ನು ಶೃಂಗರಿಸಲಾಗಿದ್ದು, ಆಯೋಧ್ಯ ನಗರಿ ಕಂಗೊಳಿಸುತ್ತಿದೆ.