ಲೇಹ್: ಗಾಲ್ವನ್ ಕಣಿವೆ ಪ್ರದೇಶದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೈನಿಕರ ಮೇಲೆ ಚೀನಾ ಯೋಧರು ಏಕಾಏಕಿ ದಾಳಿ ನಡೆಸಿದ್ದು 20 ಯೋಧರು ಹುತಾತ್ಮರಾಗಿ ಹಲವು ಸೈನಿಕರು ಗಾಯಗೊಂಡಿದ್ದರು.
ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾಗಿದ್ದಾರೆ. ಲಡಾಖ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಅಚ್ಚರಿ ಭೇಟಿ ನೀಡಿರುವ ಮೋದಿ ಗಾಲ್ವನ್ ಕಣಿವೆ ಸಂಘರ್ಷದ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯೋಧರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಸೇನೆಯ ಪ್ರಮುಖರೊಂದಿಗೆ ಯೋಧರನ್ನು ಭೇಟಿಯಾಗಿದ್ದಾರೆ. ಸೈನಿಕರೊಂದಿಗೆ ಮಾತನಾಡಿದ ಅವರು, ಭಾರತ ಎಂದಿಗೂ ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯ ಶಾಲಿಗಳ ಕಾರಣದಿಂದಾಗಿ ಭಾರತ ಯಾವುದೇ ಶಕ್ತಿಗೆ ತಲೆಬಾಗುವುದಿಲ್ಲ ಎಂದು ಸಮರ್ಥವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಯೋಧರಿಗೆ ಧೈರ್ಯ ಹೇಳಿದ್ದಾರೆ.