ಕೊರೊನಾ ಮೊದಲ ಅಲೆಯಲ್ಲಿ ಸೋಂಕು ನಗರವಾಸಿಗಗಳಿಗೆ ಹೆಚ್ಚಾಗಿ ಕಂಡು ಬಂದಿತ್ತು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿ-ಹಳ್ಳಿಗೆ ಹಬ್ಬಿದೆ. ಕೊರೊನಾ ಪರಿಸ್ಥಿತಿ ಅವಲೋಕನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಉನ್ನತ ಮಟ್ಟದ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೊರೊನಾ ಹಳ್ಳಿಗಳಿಗೆ ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಹಳ್ಳಿಗಳಲ್ಲಿ ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಸಜ್ಜುಗೊಳಿಸುವಂತೆ ಮೋದಿ ಹೇಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗೆ ನಿರ್ದೇಶನ ನೀಡಲು ಸೂಚಿಸಿದ್ದಾರೆ.
ಕೋವಿಡ್ -19 ರ ರಾಜ್ಯ ಮತ್ತು ಜಿಲ್ಲಾವಾರು ಸ್ಥಿತಿ, ತಪಾಸಣೆ, ಆಮ್ಲಜನಕದ ಲಭ್ಯತೆ, ಲಸಿಕೆ ಕಾರ್ಯದ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಪ್ರಧಾನಿಗೆ ಮಾಹಿತಿ ನೀಡಿದರು. ಹೆಚ್ಚು ಸೋಂಕಿನ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಮತ್ತು ತಾಲೂಕುಗಳಲ್ಲಿ ಕಂಟೋನ್ಮೆಂಟ್ ನೀತಿ ಜಾರಿಗೆ ತರಬೇಕೆಂದು ಮೋದಿ ಹೇಳಿದ್ದಾರೆ. ಅಂತಹ ಪ್ರದೇಶಗಳಲ್ಲಿ ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ವೇಗಗೊಳಿಸಲು ಅವರು ನಿರ್ದೇಶನ ನೀಡಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ, ಯಾವುದೇ ಮುಚ್ಚುಮರೆಯಿಲ್ಲದೆ ಸರಿಯಾದ ಡೇಟಾ ನೀಡುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಹೋಗಿ ಮೇಲ್ವಿಚಾರಣೆ ಮಾಡುವಷ್ಟು ಸಂಪನ್ಮೂಲಕ್ಕೆ ಒತ್ತು ನೀಡುವಂತೆ ಮೋದಿ ಸಲಹೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾರ್ಗಸೂಚಿ ನೀಡುವಂತೆ ಸಲಹೆ ನೀಡಿದ್ದಾರೆ.