ನವದೆಹಲಿ: ದೇಶಾದ್ಯಂತ 74 ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ಸರಳವಾಗಿ ನಡೆದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ.
ಮುಂದಿನ ವರ್ಷ 75 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ನಮ್ಮ ಗುರಿ ಈಡೇರಿಸಿಕೊಳ್ಳಬೇಕಿದೆ. ಕೊರೋನಾ ಸಂಕ್ರಾಮಿಕ ರೋಗದ ವಿರುದ್ಧ ಭಾರತಕ್ಕೆ ಜಯ ಸಿಗಲಿದೆ. ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಲಕ್ಷಾಂತರ ಜನರ ತ್ಯಾಗ ಬಲಿದಾನ ಇದರ ಹಿಂದೆ ಇದೆ. ಸ್ವಾತಂತ್ರ್ಯ ಸೇನಾನಿಗಳು, ಹುತಾತ್ಮರಿಗೆ ನನ್ನ ನಮನಗಳು ಎಂದು ಹೇಳಿದ್ದಾರೆ.
ಇಂದು ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಕಾಣಿಸುತ್ತಿಲ್ಲ. ಕೊರೊನಾ ಸೋಂಕಿನಿಂದ ಹಲವು ಅಡೆತಡೆ ಉಂಟಾಗಿವೆ. ಕೊರೋನಾ ವಾರಿಯರ್ಸ್ ಗೆ ನಮನಗಳು. ಕೊರೋನಾ ಸಂಕಷ್ಟದಲ್ಲಿ ವಾರಿಯರ್ಸ್ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸೋಂಕು, ಪ್ರವಾಹ, ಭೂ ಕುಸಿತದಿಂದಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ಹೇಳಿದ್ದಾರೆ.
ನಾವು ಹಲವು ಸಂಕಲ್ಪಗಳೊಂದಿಗೆ ಮುನ್ನಡೆಯಬೇಕಿದೆ. ನಮ್ಮವರ ಹೋರಾಟವನ್ನು ಎಂದು ಮರೆಯಬಾರದು. ಮುಂದಿನ ವರ್ಷ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. ಈ ವೇಳೆಗೆ ನಮ್ಮ ಸಂಕಲ್ಪ ಈಡೇರಬೇಕು. ಭಾರತ ಬ್ರಿಟಿಷರ ವಿರುದ್ಧದ ಗೆಲ್ಲಲು ವಿವಿಧತೆಯಲ್ಲಿ ಏಕತೆ ಮಹತ್ವ ಪಡೆದಿದೆ. ಸ್ವಾತಂತ್ರ್ಯೋತ್ಸವದ ದಿನ ಸ್ವಾತಂತ್ರ್ಯ ಯೋಧರನ್ನು ನೆನೆಯಬೇಕು. ಇದರ ಜೊತೆಗೆ ಭವಿಷ್ಯದ ಕುರಿತು ಕೆಲವು ಗುರಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.