ಪ್ರತಿವರ್ಷ ಅಕ್ಟೋಬರ್ 9ನೇ ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಚೆಗೆ ಸಂಬಂಧಿಸಿದ ಪಿನ್ ಕೋಡ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ.
ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಅಡ್ರೆಸ್ ಬರೆಯುವಾಗ ಪಿನ್ ಕೋಡ್ ಬರೆಯುವುದನ್ನು ಕೇಳಿದ್ದಿರಿ. ಈ ‘ಪಿನ್ ಕೋಡ್’ ಕುರಿತಂತೆ ನಿಮಗೊಂದಿಷ್ಟು ಮುಖ್ಯ ಮಾಹಿತಿ ಇಲ್ಲಿದೆ ನೋಡಿ.
‘ಪಿನ್ ಕೋಡ್’ ಎಂದರೆ ‘ಪೋಸ್ಟಲ್ ಇಂಡೆಕ್ಸ್ ನಂಬರ್’. ಈ ‘ಪಿನ್ ಕೋಡ್’ ನಲ್ಲಿ ಆರು ಅಂಕಿಗಳಿರುತ್ತವೆ. ಭಾರತೀಯ ಅಂಚೆ ಇಲಾಖೆ ಇದನ್ನು ಬಳಸುತ್ತಿದೆ. ಇದರಿಂದ ಸುಲಭವಾಗಿ ನಿಮ್ಮ ಅಂಚೆ ಪತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸಬಹುದಾಗಿದೆ. 1972 ರ ಆಗಸ್ಟ್ 15ರಂದು ಇದನ್ನು ಪರಿಚಯಿಸಲಾಯಿತು.
ಪ್ರಸ್ತುತ ದೇಶದಲ್ಲಿ 9 ಪಿನ್ ಕೋಡ್ ವಲಯಗಳಿವೆ. 8 ಭೌಗೋಳಿಕ ವಲಯಗಳಾದರೆ 1 ಆರ್ಮಿ ಪೋಸ್ಟಲ್ ಸರ್ವೀಸ್. ಅದು ಸೈನ್ಯಕ್ಕೆ ಮಾತ್ರ ಮೀಸಲಾಗಿದೆ. ಪಿನ್ ಕೋಡ್ 6 ಡಿಜಿಟ್ ಗಳಲ್ಲಿ ಮೊದಲ ಸಂಖ್ಯೆ ರೀಜನ್(ವಲಯ) ಪ್ರತಿಬಿಂಬಿಸುತ್ತದೆ. ಎರಡನೇ ಸಂಖ್ಯೆ ಉಪ ವಲಯವನ್ನ, ಅಥವಾ ಪೋಸ್ಟಲ್ ಸರ್ಕಲ್/ ರಾಜ್ಯವನ್ನು ಸೂಚಿಸುತ್ತದೆ. ಮೂರನೇ ಸಂಖ್ಯೆ ಸಾರ್ಟಿಂಗ್ ಅಥವಾ ಕಂದಾಯ ಜಿಲ್ಲಾ ವಿಭಾಗವನ್ನು ಸೂಚಿಸುತ್ತದೆ. ಕೊನೆಯ ಮೂರು ಸಂಖ್ಯೆಗಳು ಡೆಲಿವರಿ ಪೋಸ್ಟ್ ಆಫೀಸ್ ಗಳನ್ನು ಸೂಚಿಸುತ್ತವೆ.
1,2 ಉತ್ತರ ವಲಯ, 3,4 ಪಶ್ಚಿಮ ವಲಯ, 5,6 ದಕ್ಷಿಣ ವಲಯ, 7,8 ಪೂರ್ವ ವಲಯ ಹಾಗೂ 9 ಆರ್ಮಿ ಪೋಸ್ಟಲ್ ಸರ್ವೀಸ್ ಆಗಿರುತ್ತವೆ. ಇವುಗಳಲ್ಲಿ ಉತ್ತರ ವಲಯದಲ್ಲಿ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಉತ್ತರಾಂಚಲ್ ರಾಜ್ಯಗಳಿವೆ. ಪಶ್ಚಿಮ ವಲಯದಲ್ಲಿ ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಘಡ, ದಕ್ಷಿಣ ವಲಯದಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪೂರ್ವ ವಲಯದಲ್ಲಿ ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ ಜಾರ್ಖಂಡ್ ಹಾಗೂ ಈಶಾನ್ಯ ರಾಜ್ಯಗಳು ಬರುತ್ತವೆ.