ನೀರಿಲ್ಲದ ತೊಟ್ಟಿಯೊಂದರಲ್ಲಿ ಕತ್ತು ತೂರಿಸಿರುವಾಗಲೇ ಜೀವ ಬಿಟ್ಟಿರುವ ರಾಜಸ್ಥಾನದ ಒಂಟೆಯೊಂದರ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾರ್ಮೆರ್ ಜಿಲ್ಲೆಯ ಬಯಾತು ತಾಲ್ಲೂಕಿನಲ್ಲಿ ಈ ಘಟನೆ ಜರುಗಿದೆ.
ನೀರಿಲ್ಲದೇ ದಿನಗಟ್ಟಲೇ ಬದುಕಬಲ್ಲ ಒಂಟೆಗಳು ಈ ರೀತಿಯಾಗಿ ಮೃತಪಡುತ್ತಿರುವುದು ಇದೇ ಮೊದಲು ಎನ್ನುವ ಇಲ್ಲಿನ ಸ್ಥಳೀಯರು, ಜಾನುವಾರುಗಳ ಈ ದಾರುಣ ಪರಿಸ್ಥಿತಿಗೆ ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಸರ್ಕಾರೀ ಸವಲತ್ತುಗಳಲ್ಲಿ ಮಜಾವಾಗಿ ಜೀವನ ಸಾಗಿಸುತ್ತಿರುವುದಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
“ಪ್ರವಾಸೋದ್ಯಮದ ಭಾಗವಾಗಿ ಒಂಟೆಗಳನ್ನು ಸರ್ಕಾರ ಪರಿಗಣಿಸಿದೆ. ಆದರೂ ಸಹ ಈ ಜೀವಿಗಳನ್ನು ಸಂರಕ್ಷಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆ ಸೃಷ್ಟಿಸಿರುವ ತೊಟ್ಟಿಗಳು ನೀರಿಲ್ಲದೇ ಒಣಗಿಹೋಗುತ್ತಿರುವ ಕಾರಣ ವನ್ಯಜೀವಿಗಳು ನೀರಿಲ್ಲದೇ ಸತ್ತುಹೋಗುತ್ತಿವೆ. ಸರ್ಕಾರ ರಾಜಕಾರಣ ಮಾಡುವುದನ್ನು ಬಿಟ್ಟು ಈ ಮೂಕ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ” ಎನ್ನುತ್ತಾರೆ ಇಲ್ಲಿನ ಕಾಲುರಾಮ್ ಸಜ್ನಾನಿ.